ಮಾಲ್ನಲ್ಲಿ ನಮಾಝ್ಗೆ ಅವಕಾಶ ನೀಡುವುದನ್ನು ವಿರೋಧಿಸಿ ಹನುಮಾನ್ ಚಾಲೀಸಾ ಪಠಿಸಲು ಯತ್ನಿಸಿದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆದ ಘಟನೆ ಲಕ್ನೋದಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ರಾಷ್ಟ್ರೀಯ ಹಿಂದೂ ಸಂರಕ್ಷಕ ಸೇನೆಯ ಸದಸ್ಯರನ್ನು ಮಾಲ್ಗೆ ಪ್ರವೇಶ ನಿರಾಕರಿಸಿದ ನಂತರ ಅದರ ನಾಯಕ ಆದಿತ್ಯ ಮಿಶ್ರಾ ಪೊಲೀಸರೊಂದಿಗೆ ಜಟಾಪಟಿಗಿಳಿದರು.
ಕೇಸರಿ ಧ್ವಜಗಳನ್ನು ಹಿಡಿದಿದ್ದ ಕೇಸರಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು. ಈ ವೇಳೆ ಕಾರ್ಯಕರ್ತರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು ಮತ್ತು ನಂತರ ಸಂಘಟನೆಯ 25 ಸದಸ್ಯರನ್ನು ಬಂಧಿಸಲಾಯಿತು.
ಇದಕ್ಕೂ ಮುನ್ನ ಇಬ್ಬರು ಯುವಕರು ಮಾಲ್ನಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಮಾಲ್ ಉತ್ತರ ಭಾರತದಲ್ಲೇ ಅತಿ ದೊಡ್ಡ ಮಾಲ್ ಎಂದು ಹೇಳಲಾಗಿದೆ. ಮಾಲ್ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲ್ನಲ್ಲಿ ನಮಾಜ್ಗೆ ಅವಕಾಶ ನೀಡಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ಹಿಂದೂ ಮಹಾಸಭಾ ಪೊಲೀಸರಿಗೆ ದೂರು ನೀಡಿತ್ತು.
ಒಂದು ವೇಳೆ ನಮಾಜ್ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ಹನುಮಾನ್ ಚಾಲೀಸಾವನ್ನು ಪಠಿಸುತ್ತೇವೆ ಎಂದು ಸವಾಲು ಹಾಕಿದ್ದರು.
ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮಾಲ್ ಆಡಳಿತ ಮಂಡಳಿ ತಿಳಿಸಿದೆ. “ನಾವು ತನಿಖೆ ನಡೆಸುತ್ತಿದ್ದೇವೆ.ವಿಷಯ…ನಮಾಜ್ ಮಾಡುವವರು ಉದ್ಯೋಗಿಗಳೋ ಅಥವಾ ಹೊರಗಿನವರೋ ಎಂದು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ವಕ್ತಾರರು ತಿಳಿಸಿದ್ದಾರೆ.