ಬೆಳಗಾವಿ: ಕೆಎಂಎಫ್ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿಯೂ ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿಗೆ ಏಕರೂಪದ ದರ ನಿಗದಿಮಾಡುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಹಾಲು ಉತ್ಪಾದಕರ ಮಕ್ಕಳ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬೆಳಗಾವಿ ಹಾಲು ಒಕ್ಕೂಟದ ಆವರಣದಲ್ಲಿ 100 ವಿದ್ಯಾರ್ಥಿಗಳ ವಸತಿಗಾಗಿ ವಿದ್ಯಾರ್ಥಿನಿಲಯ ನಿರ್ಮಿಸುತ್ತಿದ್ದು, ಹಾಲು ಒಕ್ಕೂಟ ಇರುವ ಎಲ್ಲಾ ಜಿಲ್ಲೆಗಳಲ್ಲಿ ರೈತರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿನಿಲಯ ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ರೈತರಿಗೆ ಹಸು ಮತ್ತು ಎಮ್ಮೆ ಹಾಲಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ದರ ನೀಡಲಾಗುವುದು ಎಂದ ಅವರು, ಕೆಎಂಎಫ್ ಸ್ವಂತ ಬ್ಯಾಂಕ್ ಸ್ಥಾಪನೆಗೆ ಚಿಂತನೆ ನಡೆದಿದೆ. ಮುಖ್ಯಮಂತ್ರಿಗಳು ಬ್ಯಾಂಕ್ ಸ್ಥಾಪಿಸಿದರೆ 100 ಕೋಟಿ ರೂಪಾಯಿ ದುಡಿಯುವ ಬಂಡವಾಳ ನೀಡುವುದಾಗಿ ಭರವಸೆ ನೀಡಿದ್ದು, ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ಕೆಎಂಎಫ್ ಬ್ಯಾಂಕ್ ಸ್ಥಾಪನೆ ಮಾಡುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.