ರೈತರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಶುಭ ಸುದ್ದಿ ನೀಡುವ ಸಾಧ್ಯತೆ ಇದೆ. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸುವ ಕುರಿತು ಭರವಸೆ ನೀಡಲಾಗಿದೆ.
ಯಾವುದೇ ಸಾಲ ಪಡೆಯಲು ಬ್ಯಾಂಕಿಗೆ ಹೋದಾಗ ಅಂತಹ ಸಂದರ್ಭದಲ್ಲಿ ಗ್ರಾಹಕರ ಸಿಬಿಲ್ ಸ್ಕೋರ್ ಪರಿಶೀಲನೆ ಬಳಿಕವೇ ಸಾಲ ನೀಡಲಾಗುತ್ತದೆ. ಆದರೆ ಅತಿವೃಷ್ಟಿ-ಅನಾವೃಷ್ಟಿ ಸಂದರ್ಭದಲ್ಲಿ ರೈತರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಸಹಜವಾಗಿಯೇ ಅವರ ಸಿಬಿಲ್ ಸ್ಕೋರ್ ಕಡಿಮೆಯಾಗಿರುತ್ತದೆ.
ಇಂತಹ ಸಂದರ್ಭದಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ಸಾಲ ಸಿಗುವುದು ಕಷ್ಟವಾಗುತ್ತದೆ. ಹೀಗಾಗಿ ಮಂಗಳವಾರದಂದು ರೈತ ಸಂಘಟನೆಗಳು ಬೆಂಗಳೂರಿನ ಆರ್.ಬಿ.ಐ. ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಜನರಲ್ ಮ್ಯಾನೇಜರ್ ಆನಂದ ಕಿಶೋರ್ ಪಾಟೀಲ್, ಈ ವಿಚಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಅವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.