ಕೆಲವರಿಗೆ ರೈಸ್ ಬಾತ್ ಎಂದರೆ ಇಷ್ಟ. ಬೆಳಿಗ್ಗೆ ತಿಂಡಿಗೂ, ಮಧ್ಯಾಹ್ನ ಊಟಕ್ಕೆ ರೈಸ್ ಬಾತ್ ತಿನ್ನುವವರು ಇದ್ದಾರೆ. ಅಂತಹವರಿಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದ ಮಸಾಲ ಬಾತ್ ವಿಧಾನ ಇದೆ.
ಬೇಕಾಗುವ ಸಾಮಾಗ್ರಿಗಳು:
ಅಕ್ಕಿ – 1 ಕಪ್, 2 – ಹಸಿಮೆಣಸು, 1 – ಸಣ್ಣ ಟೊಮೆಟೊ, 1 ಟೀ ಸ್ಪೂನ್ – ಚಿಕ್ಕದ್ದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, 1 – ಆಲೂಗಡ್ಡೆ, ½ ಟೀ ಸ್ಪೂನ್ – ಸಾಸಿವೆ, ½ ಟೀ ಸ್ಪೂನ್ ಜೀರಿಗೆ, ಚಿಟಿಕೆ – ಇಂಗು, 1 – ಈರುಳ್ಳಿ, ½ ಟೀ ಸ್ಪೂ ನ್- ಕಸೂರಿಮೇಥಿ, 1 ಸ್ಪೂನ್ – ಮೊಸರು, 1 ಟೀ ಸ್ಪೂನ್ – ಗರಂ ಮಸಾಲ ಪುಡಿ, ಉಪ್ಪು – ರುಚಿಗೆ ತಕ್ಕಷ್ಟು, 2 ಸ್ಪೂನ್ – ಎಣ್ಣೆ.
ಮಾಡುವ ವಿಧಾನ:
ಒಂದು ಕುಕ್ಕರ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ, ಜೀರಿಗೆ, ಇಂಗು, ಕತ್ತರಿಸಿ ಹಸಿಮೆಣಸು ಹಾಕಿ ನಂತರ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಈರುಳ್ಳಿ ಕೆಂಪಾಗುತ್ತಲೆ ಕೊತ್ತಂಬರಿ ಸೊಪ್ಪು, ಕಸೂರಿಮೇಥಿ ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿ.
ನಂತರ ಕತ್ತರಿಸಿದ ಆಲೂಗಡ್ಡೆ, ಮೊಸರು, ಕತ್ತರಿಸಿದ ಟೊಮೆಟೊ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಅಕ್ಕಿ ಸೇರಿಸಿ 2 ಕಪ್ ನೀರು ಹಾಕಿ ಅದು ಕುದಿ ಬರುತ್ತಿದ್ದಂತೆ ಅದಕ್ಕೆ ಗರಂ ಮಸಾಲ ಪುಡಿ, ಉಪ್ಪು ಹಾಕಿ 4 ವಿಷಲ್ ಕೂಗಿಸಿಕೊಳ್ಳಿ. ರುಚಿಕರವಾದ ಮಸಾಲ ಬಾತ್ ಈಗ ಸವಿಯಲು ಸಿದ್ಧ.