ಮಶ್ರೂಮ್ ನಲ್ಲಿ ನಾನಾ ಬಗೆಯ ಅಡುಗೆಗಳನ್ನು ಮಾಡುತ್ತೇವೆ. ಮಶ್ರೂಮ್ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್- ಬಾಸುಮತಿ ಅಕ್ಕಿ, 2ಸ್ಪೂನ್- ತುಪ್ಪ, 4- ಲವಂಗ, 1- ಏಲಕ್ಕಿ, 4- ಕರಿಮೆಣಸಿನಕಾಳು, ಉಪ್ಪು- ರುಚಿಗೆ ತಕ್ಕಷ್ಟು, 1 ಟೀ ಸ್ಪೂನ್- ಲಿಂಬೆಹಣ್ಣಿನ ರಸ, ಇನ್ನು ಮಶ್ರೂಮ್ ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು- 2 ಟೇಬಲ್ ಸ್ಪೂನ್- ಎಣ್ಣೆ, 1 ಟೇಬಲ್ ಸ್ಪೂನ್- ತುಪ್ಪ, 2- ಲವಂಗ, 2- ಏಲಕ್ಕಿ, 4-ಮೆಣಸಿನಕಾಳು, 1 ಇಂಚು-ಚಕ್ಕೆ, 1ಕಪ್- ಕತ್ತರಿಸಿದ ಈರುಳ್ಳಿ, 4- ಸೀಳಿದ ಹಸಿಮೆಣಸು, 1 ಟೀ ಸ್ಪೂನ್- ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಟೀ ಸ್ಪೂನ್- ಕೊತ್ತಂಬರಿ ಬೀಜ, ½ ಟೀ ಸ್ಪೂನ್ – ಖಾರದಪುಡಿ, ಉಪ್ಪು- ರುಚಿಗೆ ತಕ್ಕಷ್ಟು, ½ ಟೀ ಸ್ಪೂನ್- ಅರಿಶಿನ, 200 ಗ್ರಾಂ- ಮಶ್ರೂಮ್, 2 ಟೇಬಲ್ ಸ್ಪೂನ್- ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ:
ಮೊದಲಿಗೆ ಅಕ್ಕಿಯನ್ನು ತೊಳೆದು 20 ನಿಮಿಷಗಳ ಕಾಲ ನೆನೆಸಿಡಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ. ಏಲಕ್ಕಿ, ಲವಂಗ, ಕರಿಮೆಣಸಿನಕಾಳು ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ನೆನೆಸಿದ ಅಕ್ಕಿಯ ನೀರನ್ನು ಬಸಿದುಕೊಂಡು ಅಕ್ಕಿಯನ್ನು ಪ್ಯಾನ್ ಗೆ ಹಾಕಿ 4 ಕಪ್ ನೀರು, ನಿಂಬೆಹಣ್ಣಿನ ರಸ, ಉಪ್ಪು ಹಾಕಿ ಒಂದು ಮುಚ್ಚಳ ಮುಚ್ಚಿ 75% ನಷ್ಟು ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ.
ನಂತರ ಗ್ಯಾಸ್ ಒಲೆ ಮೇಲೆ ಒಂದು ದಪ್ಪ ತಳದ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಗೂ ತುಪ್ಪ ಹಾಕಿ. ನಂತರ ಏಲಕ್ಕಿ ಲವಂಗ, ಕರಿಮೆಣಸು, ಚಕ್ಕೆ ಹಾಕಿ ಫ್ರೈ ಮಾಡಿ. ಇದಕ್ಕೆ ಈರುಳ್ಳಿ, ಹಸಿಮೆಣಸು ಕೂಡ ಸೇರಿಸಿ. ಈರುಳ್ಳಿ ಕೆಂಪಗಾದ ನಂತರ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
ಇದಕ್ಕೆ ಕೊತ್ತಂಬರಿ ಪುಡಿ, ಖಾರದಪುಡಿ, ಉಪ್ಪು, ಅರಿಶಿನ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. 2 ಚಮಚ ನೀರು ಸೇರಿಸಿ ಕೈಯಾಡಿಸಿ. ನಂತರ ಇದಕ್ಕೆ ಮಶ್ರೂಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ.
ಇದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ಬೇಯಿಸಿಟ್ಟುಕೊಂಡ ಅನ್ನವನ್ನು ಈ ಮಶ್ರೂಮ್ ಮಸಾಲೆ ಮೇಲೆ ಹಾಕಿ ಎಲ್ಲಾ ಕಡೆ ಸಮನಾಗಿ ಹರಡಿಕೊಂಡು ಒಂದು ಮುಚ್ಚಳ ಮುಚ್ಚಿ 30 ನಿಮಿಷಗಳ ಕಾಲ ಹದ ಉರಿಯಲ್ಲಿ ಬೇಯಿಸಿಕೊಳ್ಳಿ.