ಪಾಯಸ ಮಾಡಿಕೊಂಡು ತಿನ್ನಬೇಕು ಅನಿಸ್ತಿದಿಯಾ…? ಹಾಗಿದ್ರೆ ತಡವೇಕೆ…? ರುಚಿಕರವಾದ ಗಸಗಸೆ ಪಾಯಸ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಇಲ್ಲಿದೆ ನೋಡಿ.
ಅರ್ಧ ಕಪ್- ತೆಂಗಿನಕಾಯಿ ತುರಿ, 4-ಏಲಕ್ಕಿ, 1 ಟೇಬಲ್ ಸ್ಪೂನ್- ಅಕ್ಕಿ, ಬಾದಾಮಿ, ಸ್ವಲ್ಪ, ಗೋಡಂಬಿ-ಸ್ವಲ್ಪ, ಒಣಕೊಬ್ಬರಿ-1/4 ಕಪ್, ¼ ಕಪ್-ಗಸಗಸೆ, 11/2 ಕಪ್-ಬೆಲ್ಲ, ತುಪ್ಪ-2 ಟೇಬಲ್ ಸ್ಪೂನ್.
ಒಂದು ಪ್ಯಾನ್ ಗೆ ಅಕ್ಕಿ ಮತ್ತು ಗಸಗಸೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಬಾದಾಮಿ, ಗೋಡಂಬಿಯನ್ನು ಸ್ವಲ್ಪ ಹುರಿದುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಹುರಿದುಕೊಂಡ ಗಸಗಸೆ, ಏಲಕ್ಕಿ, ಹಸಿಕೊಬ್ಬರಿ, ಒಣಕೊಬ್ಬರಿ, ಗೋಡಂಬಿ ಬಾದಾಮಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
ಒಂದು ಪಾತ್ರೆಗೆ 2 ಟೇಬಲ್ ಸ್ಪೂನ್ ನಷ್ಟು ತುಪ್ಪ ಹಾಕಿ ಅದಕ್ಕೆ 5 ಒಣದ್ರಾಕ್ಷಿ, 2 ಗೋಡಂಬಿ ಹಾಕಿ ಫ್ರೈ ಮಾಡಿಕೊಳ್ಳಿ.ಆಮೇಲೆ ರುಬ್ಬಿಟ್ಟುಕೊಂಡ ಗಸಗಸೆ ಮಿಶ್ರಣವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಆಮೇಲೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕೈಯಾಡಿಸಿ ತಳಹತ್ತದಂತೆ ಎಚ್ಚರ ವಹಿಸಿ.ಆಮೇಲೆ 1 ಕಪ್ ನೀರು ಹಾಕಿ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ. ಆಮೇಲೆ ಬೆಲ್ಲ ಸೇರಿಸಿ 5 ನಿಮಿಷಗಳ ಕಾಲ ಕುದಿಸಿಕೊಂಡರೆ ರುಚಿಕರವಾದ ಗಸಗಸೆ ಪಾಯಸ ಸವಿಯಲು ಸಿದ್ಧ.