ಆಪಂ ಇದು ಕೇರಳದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ಕಡಿಮೆ. ಹಾಗೆಯೇ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ.
2 ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು 5 ಗಂಟೆಗಳ ಕಾಲ ನೆನೆಸಿಡಿ. ನಂತರ ಈ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಅಕ್ಕಿ ಮಿಶ್ರಣದಿಂದ 2 ಟೇಬಲ್ ಸ್ಪೂನ್ ಅಕ್ಕಿಹಿಟ್ಟನ್ನು ಒಂದು ಪ್ಯಾನ್ ಗೆ ಹಾಕಿಕೊಳ್ಳಿ. ನಂತರ ಮಿಕ್ಸಿಯಲ್ಲಿ ಉಳಿದ ಅಕ್ಕಿ ಹಿಟ್ಟಿಗೆ 2 ಕಪ್ ತೆಂಗಿನಕಾಯಿಯನ್ನು ಸೇರಿಸಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.
ನಂತರ ಪ್ಯಾನ್ ನಲ್ಲಿದ್ದ 2 ಟೇಬಲ್ ಸ್ಪೂನ್ ಅಕ್ಕಿಹಿಟ್ಟಿಗೆ ¾ ಕಪ್ ನೀರು ಸೇರಿಸಿ ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ದಪ್ಪ ಮಿಶ್ರಣವಾಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣವನ್ನು ರುಬ್ಬಿಟ್ಟುಕೊಂಡ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇನ್ನೊಂದು ಅಗಲವಾದ ಪಾತ್ರೆಗೆ ಈ ಹಿಟ್ಟಿನ ಮಿಶ್ರಣವನ್ನು ಹಾಕಿಕೊಳ್ಳಿ. ರಾತ್ರಿಯಿಡೀ ಇದನ್ನು ಹಾಗೆಯೇ ಇಡಿ. ಬೆಳಿಗ್ಗೆ ಈ ಹಿಟ್ಟಿನ ಮಿಶ್ರಣಕ್ಕೆ 1 ಟೇಬಲ್ ಸ್ಪೂನ್ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಿಟ್ಟನ್ನು ದೋಸೆ ಮಾಡುವ ಹದಕ್ಕೆ ಕಲಸಿಕೊಳ್ಳಿ. ನಂತರ ಆಪಂ ತವಾಕ್ಕೆ ಇದನ್ನು ಹಾಕಿಕೊಂಡು ಬಿಸಿ ಬಿಸಿ ಆಪಂ ಮಾಡಿಕೊಳ್ಳಿ.