ಅಕ್ಕಿರೊಟ್ಟಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಬಿಸಿಬಿಸಿ ಅಕ್ಕಿರೊಟ್ಟಿ ಕಾಯಿ ಚಟ್ನಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ ರುಚಿಕರವಾದ ಅಕ್ಕಿರೊಟ್ಟಿ ಮಾಡುವ ವಿಧಾನ ಇದೆ. ಬೆಳಿಗ್ಗಿನ ತಿಂಡಿಗೆ ಮಾಡಿಕೊಂಡು ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ ಅಕ್ಕಿ ಹಿಟ್ಟು, 1 ಸಣ್ಣ ಈರುಳ್ಳಿ (ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು), 3 ಟೇಬಲ್ ಸ್ಪೂನ್ – ತೆಂಗಿನಕಾಯಿ ತುರಿ, ಕ್ಯಾರೆಟ್ ತುರಿ – 3 ಟೇಬಲ್ ಸ್ಪೂನ್, 2 – ಹಸಿಮೆಣಸು – ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು, 3 ಟೇಬಲ್ ಸ್ಪೂನ್ – ಕೊತ್ತಂಬರಿಸೊಪ್ಪು, ½ ಟೀ ಸ್ಪೂನ್ – ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ½ ಟೀ ಸ್ಪೂನ್ – ಶುಂಠಿ ತುರಿ, ನೀರು – ಸ್ವಲ್ಪ, 1 ಟೇಬಲ್ ಸ್ಪೂನ್ – ಎಣ್ಣೆ, 3 ಟೇಬಲ್ ಸ್ಪೂನ್ – ಸಬ್ಬಸ್ಸಿಗೆ ಸೊಪ್ಪು, ಅರಿಶಿನ ಪುಡಿ – ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಈರುಳ್ಳಿ, ಹಸಿಮೆಣಸು, ಕೊತ್ತಂಬರಿಸೊಪ್ಪು, ಸಬ್ಬಸ್ಸಿಗೆ ಸೊಪ್ಪುಗಳನ್ನೆಲ್ಲಾ ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ದೊಡ್ಡ ಬೌಲ್ ಗೆ ಅಕ್ಕಿ ಹಿಟ್ಟು ಹಾಕಿಕೊಂಡು ಅದಕ್ಕೆ ಉಪ್ಪು, ಜೀರಿಗೆ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿಸೊಪ್ಪು, ಕ್ಯಾರೆಟ್, ತೆಂಗಿನಕಾಯಿ ತುರಿ, ಶುಂಠಿ ತುರಿ, ಸಬ್ಬಸ್ಸಿಗೆ ಸೊಪ್ಪು, ಅರಿಶಿನ ಪುಡಿ ಎಲ್ಲಾ ಸೇರಿಸಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ನೀರು ಸೇರಿಸಿಕೊಂಡು ಮುದ್ದೆ ರೀತಿ ಮಾಡಿಕೊಳ್ಳಿ.
ಈ ಮುದ್ದೆ ಮೆದುವಾಗಿರಲಿ. ಇದರಿಂದ ಹದ ಗಾತ್ರದ ಉಂಡೆ ಮಾಡಿಕೊಂಡು ಒಂದು ಬಾಳೆಲೆಯ ಮೇಲೆ ಈ ಉಂಡೆ ಇಟ್ಟು ಕೈಗೆ ತುಸು ನೀರು ಸವರಿಕೊಂಡು ನಿಧಾನಕ್ಕೆ ತಟ್ಟಿ. ನಂತರ ಗ್ಯಾಸ್ ಮೇಲೆ ತವಾ ಇಟ್ಟು ಅದಕ್ಕೆ ತುಸು ಎಣ್ಣೆ ಹಚ್ಚಿ ಈ ರೊಟ್ಟಿಯನ್ನು ತವಾದ ಮೇಲೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ರುಚಿಕರವಾದ ಅಕ್ಕಿರೊಟ್ಟಿಯನ್ನು ಕಾಯಿಚಟ್ನಿ ಜತೆ ಸವಿಯಿರಿ.