ಘಂ ಎನ್ನುವ ಮೀನು ಸಾರು ಇದ್ದರೆ ಮಾಂಸಹಾರ ಪ್ರಿಯರಿಗೆ ಮತ್ತೇನೂ ಬೇಡ. ಅನ್ನದ ಜತೆ ಮೀನು ಸಾರು ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ರುಚಿಕರವಾದ ಅಂಜಲ್ ಮೀನಿನ ಸಾರು ಮಾಡುವ ವಿಧಾನವಿದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
350 ಗ್ರಾಂ – ಅಂಜಲ್ ಮೀನು, ಹುಣಸೆಹಣ್ಣಿನ ರಸ – 1 ಟೀ ಸ್ಪೂನ್, 1 – ಈರುಳ್ಳಿ, 1 ಟೀ ಸ್ಪೂನ್ – ಶುಂಠಿ ತುರಿ, 1 ಟೀ ಸ್ಪೂನ್ – ಬೆಳ್ಳುಳ್ಳಿ (ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು), 6 – ಹಸಿಮೆಣಸು, 2 – ಟೊಮೆಟೊ, 1 ½ ಟೇಬಲ್ ಸ್ಪೂನ್ – ಖಾರದಪುಡಿ, 1/2 ಟೀ ಸ್ಪೂನ್ – ಅರಿಶಿನ ಪುಡಿ, 1 ಕಪ್ – ತೆಂಗಿನಕಾಯಿ ಹಾಲು, 1 ಕಪ್ – ನೀರು, ½ ಟೀ ಸ್ಪೂನ್ – ಮೆಂತೆಕಾಳು, 5 ಎಸಳು – ಕರಿಬೇವು, 1 ಟೀ ಸ್ಪೂನ್ – ಕೊತ್ತಂಬರಿಸೊಪ್ಪು, 3 ಟೇಬಲ್ ಸ್ಪೂನ್ – ತೆಂಗಿನೆಣ್ಣೆ, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಮೀನನ್ನು ಪೀಸ್ ಮಾಡಿಕೊಂಡು ಚೆನ್ನಾಗಿ ತೊಳೆದು ನೀರನ್ನೆಲ್ಲಾ ಬಸಿದು ಇಟ್ಟುಕೊಳ್ಳಿ. ಹಸಿಮೆಣಸು, ಈರುಳ್ಳಿ, ಟೊಮೆಟೊವನ್ನು ಕೂಡ ಕತ್ತರಿಸಿಟ್ಟುಕೊಳ್ಳಿ. ಒಂದು ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಅದಕ್ಕೆ ಮೆಂತೆಕಾಳು ಸೇರಿಸಿ ನಂತರ ಕರಿಬೇವು, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಟೊಮೆಟೊ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಟೊಮೆಟೊ ಬೆಂದ ಮೇಲೆ ಖಾರದ ಪುಡಿ, ಅರಿಶಿನ, ಹುಣಸೆಹಣ್ಣಿನ ಮಿಶ್ರಣ ಸೇರಿಸಿ ಹದ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ನೀರು ಸೇರಿಸಿ ಒಂದು ಕುದಿ ಕುದಿಸಿಕೊಂಡು ಇದಕ್ಕೆ ಮೀನಿನ ತುಂಡುಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿಕೊಳ್ಳಿ. ಮೀನು ಬೆಂದ ಮೇಲೆ ತೆಂಗಿನಕಾಯಿ ಹಾಲು, ಕೊತ್ತಂಬರಿಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಕುದಿ ಬರುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.