ಮುಂಬೈನಲ್ಲಿರುವ ಹಲವಾರು ರಿಲಯನ್ಸ್ ಜಿಯೋ ಬಳಕೆದಾರರು ಕರೆಗಳನ್ನು ಸ್ವೀಕರಿಸಲು ಅಥವಾ ಕರೆಗಳನ್ನು ಮಾಡಲು ಸಾಧ್ಯವಾಗದೇ ಅಡಚಣೆಯನ್ನು ಅನುಭವಿಸಿದ್ದಾರೆ.
ಈ ಸಂಬಂಧ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಿಯೋ ಬಳಕೆದಾರರು ತಾವು ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಕಾಣುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ರಿಲಯನ್ಸ್ ಜಿಯೋ ಬಳಕೆದಾರರು ಕರೆಗಳನ್ನು ಮಾಡಲು ಮುಂದಾದಾಗಲೆಲ್ಲ ನಾಟ್ ರಿಜಿಸ್ಟ್ರರ್ಡ್ ಆನ್ ನೆಟ್ವರ್ಕ್ ಎಂಬ ಸಂದೇಶವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಇಂದು ಜಿಯೋ ನೆಟ್ವರ್ಕ್ ಮುಂಬೈನಲ್ಲಿ ವ್ಯತ್ಯಯಗೊಂಡಿದೆ. ಈ ಸಮಸ್ಯೆಯು ಇನ್ಯಾವುದೇ ನಗರದಲ್ಲಿ ಉಂಟಾಗಿದೆಯೇ..? ಎಂದು ನಾಗಪಾಲ್ ಮನೋಜ್ ಎಂಬವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇನ್ನೊಬ್ಬ ಟ್ವೀಟರ್ ಬಳಕೆದಾರ ತಾನು ಕಳೆದ 2 ದಿನಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿರೋದಾಗಿ ಹೇಳಿದ್ದಾರೆ.
ಇನ್ನು ಕೆಲವರು ಮುಂಬೈನಲ್ಲಿ ತಮಗೆ ಏರ್ಟೆಲ್ ನೆಟ್ವರ್ಕ್ನಿಂದಲೂ ಸಮಸ್ಯೆ ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ರಿಲಯನ್ಸ್ ಜಿಯೋ ಕಂಪನಿಯು ಈವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಹೀಗಾಗಿ ಇದು ಮುಂಬೈನ ಪ್ರತಿಯೊಬ್ಬ ಜಿಯೋ ಬಳಕೆದಾರರಿಗೂ ಕಂಡು ಬಂದ ಸಮಸ್ಯೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.