ರಾಷ್ಟ್ರಪತಿ ಚುನಾವಣೆಗೆ ಸೋಮವಾರ ದೇಶಾದ್ಯಂತ ಮತದಾನ ನಡೆದಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವೀಲ್ ಚೇರ್ನಲ್ಲಿ ಮತದಾನ ಮಾಡಲು ಆಗಮಿಸಿದರೆ, ಬಿಹಾರದಲ್ಲಿ ಬಿಜೆಪಿ ಶಾಸಕ ಸ್ಟ್ರೆಚರ್ನಲ್ಲಿ ಆಗಮಿಸಿದ್ದರು.
ಎನ್ಡಿಎ ಅಭ್ಯಥಿರ್ಯಾಗಿ ದ್ರೌಪತಿ ಮುರ್ಮು ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ. ಇವರಿಬ್ಬರು ನಡುವೆ ಸಾಕಷ್ಟು ಪೈಪೋಟಿಯೂ ಕಾಣಿಸಿತ್ತು. ಎನ್ಡಿಎ ಅಭ್ಯರ್ಥಿ ಸೋಲಿಸಲು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪ್ರಯತ್ನ ಸಹ ನಡೆದಿದ್ದು, ಕಾಂಗ್ರೆಸ್ ಅವರನ್ನು ಬೆಂಬಲಿಸಿತ್ತು.
ಈ ನಡುವೆ ಸೋಮವಾರ ನಡೆದ ಮತದಾನ ಸಾಕಷ್ಟು ವಿಶೇಷತೆಯಿಂದ ಕೂಡಿತ್ತು. ಬಿಹಾರ ವಿಧಾನಸಭೆಯಲ್ಲಿ ಸಿದ್ಧಗೊಂಡ ವ್ಯವಸ್ಥೆಯಲ್ಲಿ ಅಲ್ಲಿನ ಜನಪ್ರತಿನಿಧಿಗಳು ಮತದಾನ ಮಾಡಿದರು. ಇವರ ನಡುವೆ ಬಿಜೆಪಿ ಶಾಸಕ ಮಿಥಿಲೇಶ್ ಕುಮಾರ್ ಸ್ಟ್ರೆಚರ್ನಲ್ಲಿ ಬಂದಿದ್ದರು. ರಸ್ತೆ ಅಪಘಾತದಿಂದಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಹಾರದಿಂದ ಒಟ್ಟು 56 ಸಂಸದರಿದ್ದಾರೆ. 40 ಲೋಕಸಭೆ ಮತ್ತು 16 ರಾಜ್ಯಸಭಾ ಸದಸ್ಯರು. ಒಟ್ಟಾಗಿ 39,200 ಮತ ಮೌಲ್ಯವನ್ನು ಹೊಂದಿವೆ. ಈ ಪೈಕಿ ಮುರ್ಮು 33,600 ಗಳಿಸುವ ನಿರೀಕ್ಷೆಯಿದೆ.