
ಬಾಲಿವುಡ್ ಚಲನಚಿತ್ರ ಕಭಿ ಖುಷ್ ಕಭಿ ಗಮ್ ನಲ್ಲಿ ಅಂಜಲಿ (ಕಾಜೋಲ್)ಯನ್ನು ಮದುವೆಯಾಗುವುದಾಗಿ ಆಕೆಯ ತಂದೆಯ ಅಂತ್ಯಕ್ರಿಯೆಯ ವೇಳೆ ರಾಹುಲ್ (ಶಾರುಖ್) ಪ್ರಸ್ತಾಪಿಸುತ್ತಾನೆ. ಇದೇ ರೀತಿ ದಕ್ಷಿಣ ಆಫ್ರಿಕಾದ ವ್ಯಕ್ತಿಯೊಬ್ಬ ತಂದೆಯ ಅಂತ್ಯಕ್ರಿಯೆಯ ವೇಳೆ ಯುವತಿಗೆ ಪ್ರಪೋಸ್ ಮಾಡಿದ್ದಾನೆ.
ಈ ವಿಡಿಯೋ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, 90,000ಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ವರದಿಯ ಪ್ರಕಾರ, ಮೊಜೆಲ್ಲಾ ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅಂತ್ಯಕ್ರಿಯೆಗೆ ತೆರಳಿದ ಆತ, ಮೊಣಕಾಲೂರಿ ಯುವತಿ ಬಳಿ ತನ್ನನ್ನು ಮದುವೆಯಾಗಲು ಬಯಸುತ್ತೀರಾ ಎಂದು ಕೇಳಿದ್ದಾನೆ. ಯುವತಿಯು ತನ್ನ ತಂದೆಯ ನಿಧನದಿಂದ ದುಃಖತಪ್ತಳಾಗಿದ್ದರೆ, ಈತ ಪ್ರಪೋಸ್ ಮಾಡಿದ್ದಾನೆ.
ಯುವಕನ ಪ್ರಸ್ತಾಪಕ್ಕೆ ಆಕೆ ಅಚ್ಚರಿಯಿಂದ ನೋಡಿದ್ದಾಳೆ. ಆದರೆ, ಏನೂ ಪ್ರತಿಕ್ರಿಯೆ ನೀಡಲಿಲ್ಲ. ಯುವತಿ ಅಳುತ್ತಿದ್ದುದು ತನಗೆ ತುಂಬಾ ಬೇಸರವನ್ನುಂಟು ಮಾಡಿತು. ಹೀಗಾಗಿ ಪ್ರಪೋಸ್ ಮಾಡಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಆದರೆ, ತಂದೆಯ ಅಂತ್ಯಕ್ರಿಯೆ ವೇಳೆ ಪ್ರಪೋಸ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ.