ಯುನೈಟೆಡ್ ಕಿಂಗ್ ಡಮ್‍ಗೆ ಯುನೈಸ್ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತದಿಂದಾಗಿ ಹಲವು ಪ್ರದೇಶಗಳು ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಭಾರಿ ಪ್ರಮಾಣದ ಗಾಳಿ ಮತ್ತು ಭಾರಿ ಮಳೆಯಿಂದಾಗಿ ಹಲವಾರು ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ.
ಭಾರಿ ಮಳೆಯಿಂದಾಗಿ ಯುಕೆಯ ಹಲವು ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಇತ್ತೀಚೆಗಷ್ಟೇ ಚಂಡಮಾರುತದ ಪ್ರಭಾವದಿಂದ ವಿಮಾನ ಅಲ್ಲಾಡುತ್ತಾ ಕಷ್ಟಪಟ್ಟು ಲ್ಯಾಂಡಿಂಗ್ ಆಗಿದ್ದ ವಿಡಿಯೋ ವೈರಲ್ ಆಗಿತ್ತು. ಇದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಮತ್ತೊಂದು ಭಯಾನಕ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯೊಂದರಲ್ಲಿ ವೇಗವಾಗಿ ಬರುತ್ತಿದ್ದ ಡಬಲ್ ಡೆಕ್ಕರ್ ಬಸ್‌ಗೆ ಮರವೊಂದು ಅಪ್ಪಳಿಸುತ್ತಿರವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮತ್ತೊಂದು ವಾಹನದಿಂದ ಚಿತ್ರೀಕರಿಸಲಾದ ದೃಶ್ಯಾವಳಿಯಲ್ಲಿ, ವೇಗವಾಗಿ ಬರುತ್ತಿದ್ದ ಡಬಲ್ ಡೆಕ್ಕರ್ ಬಸ್ ಮೇಲೆ ಮರ ಉರುಳಿ ಬಿದ್ದಿದೆ. ಬ್ರೋಮ್ಲಿಯ ಬಿಗಿನ್ ಹಿಲ್‌ನಲ್ಲಿರುವ ಕ್ಯಾಟ್‌ಫೋರ್ಡ್ ನಲ್ಲಿ ಚಲಿಸುತ್ತಿದ್ದ ಡಬಲ್ ಡೆಕ್ಕರ್ ಬಸ್‌ಗೆ ಅಪ್ಪಳಿಸಿದೆ. ಬಲವಾದ ಗಾಳಿಗೆ ಮರ ಉರುಳಿ ಬಿದ್ದಿದ್ರಿಂದ ಕೆಂಪು ಬಣ್ಣದ ಬಸ್ ನಜ್ಜುಗುಜ್ಜಾಗಿದೆ. ಅಪಘಾತದಿಂದ ಬಸ್ಸಿನ ಗಾಜು ಪುಡಿಪುಡಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಯುನೈಸ್ ಚಂಡಮಾರುತವು ಯುಕೆಯಾದ್ಯಂತ ವಿನಾಶ ಉಂಟಾಗಿದೆ. ವರದಿಗಳ ಪ್ರಕಾರ, ಸುಮಾರು ನಾಲ್ಕು ಲಕ್ಷ ಮನೆಗಳು ವಿದ್ಯುತ್ ಇಲ್ಲದೆ ಕಂಗಾಲಾಗಿದೆ.