ವಿಜಯ್ ದೇವರಕೊಂಡರ ಮುಂಬರುವ ಸಿನಿಮಾ ಲೈಗರ್ ಮೂಲಕ ಬಾಕ್ಸಿಂಗ್ ದಂತಕತೆ ಮೈಕ್ ಟೈಸನ್ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ವಿಜಯ್ ದೇವರಕೊಂಡ ಮುಂಬರುವ ಸಿನಿಮಾ ಜೆಜಿಎಂ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿದ್ದು, ಲೈಗರ್ ಚಿತ್ರೀಕರಣ ಸಂದರ್ಭದಲ್ಲಿ ತಾವು ಮೈಕ್ ಟೈಸನ್ ಎದುರು ಸೋತಿದ್ದೇನೆ ಎಂದು ಹೇಳಿದರು. ಅಲ್ಲದೇ ಇದೊಂದು ಅದ್ಭುತ ಅನುಭವವಾಗಿತ್ತು ಎಂದು ಹೇಳಿದ್ದಾರೆ.
ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಸಿನಿಮಾ ಲೈಗರ್ ಇದೇ ವರ್ಷ ಆಗಸ್ಟ್ 25ರಂದು ತೆರೆಕಾಣಲಿದೆ. ಈ ಸಿನಿಮಾದಲ್ಲಿ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೈಕ್ ಟೈಸನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಮ್ಮ ಮುಂಬರುವ ಸಿನಿಮಾದ ಬಗ್ಗೆ ಘೋಷಣೆ ಮಾಡಲು ನಿನ್ನೆ ವಿಜಯ್ ದೇವರಕೊಂಡ ಮಾಧ್ಯಮಗಳ ಎದುರು ಹಾಜರಾದರು. ಈ ವೇಳೆ ತಮ್ಮ ಶೂಟಿಂಗ್ ಅನುಭವವನ್ನು ಹಂಚಿಕೊಂಡ ದೇವರಕೊಂಡ, ಟೈಸನ್ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಒಂದು ಒಳ್ಳೆಯ ಅನುಭವವಾಗಿದೆ. ನಾನು ಅವರ ಬಳಿ ಹೊಡೆತ ತಿಂದಿದ್ದೇನೆ. ಆದರೆ ಅದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದಕ್ಕೂ ಹೆಚ್ಚನ್ನು ನಾನು ಬಹಿರಂಗಪಡಿಸುವುದಿಲ್ಲ. ಆದರೆ ಇವೆಲ್ಲ ನನ್ನ ಜೀವನದ ಅದ್ಭುತ ನೆನಪುಗಳು ಎಂದಿದ್ದಾರೆ.