59 ವರ್ಷದ ಉದ್ಯಮಿ ಗೌತಮ್ ಅದಾನಿಯವರ ನಿವ್ವಳ ಮೌಲ್ಯವು 88.5 ಶತಕೋಟಿ ಡಾಲರ್ ಮೀರಿದೆ ಎಂದು ಬ್ಲೂಮ್ಬರ್ಗ್ ಬಿಲಿಯೇನರ್ಸ್ ವರದಿ ಮಾಡಿದೆ.
ಇದು ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವಾದ 87.9 ಶತಕೋಟಿ ಡಾಲರ್ನ್ನು ಮೀರಿಸಿದೆ. ತನ್ನ ವೈಯಕ್ತಿಕ ಸಂಪತ್ತಿನಲ್ಲಿ 12 ಶತಕೋಟಿ ಡಾಲರ್ ಜಿಗಿತ ಕಾಣುವ ಮೂಲಕ ಅದಾನಿ ಈ ವರ್ಷದಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಸಂಪತ್ತನ್ನು ಗಳಿಸಿದ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.
ಅದಾನಿ ಗ್ರೂಪ್ ಸೂಕ್ತ ಸಮಯದಲ್ಲಿ ಉದ್ಯಮದ ಎಲ್ಲಾ ವಲಯಗಳನ್ನು ಪ್ರವೇಶಿಸಿದೆ ಹಾಗೂ ಸರಿಯಾಗಿ ಮುನ್ನುಗ್ಗುತ್ತಿದೆ. ಇದು ವಿದೇಶಿ ಬಂಡವಾಳ ಹೂಡಿಕೆದಾರರ ಆಯ್ದ ಬಾಂಡ್ಗಳನ್ನು ಮಾತ್ರ ಆಯ್ಕೆ ಮಾಡಿದೆ ಎಂದು ಮುಂಬೈ ಮೂಲದ ಬ್ರೋಕರೇಜ್ ಹೆಚ್ಡಿಎಫ್ಸಿ ಸೆಕ್ಯೂರಿಟೀಸ್ ಲಿಮಿಟೆಡ್ನ ರಿಟೇಲ್ ರಿಸರ್ಚ್ ಮುಖ್ಯಸ್ಥ ದೀಪಕ್ ಜಸಾನಿ ಹೇಳಿದರು.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅದಾನಿ ಗ್ರೂಪ್ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಸಾಧಾರಣ ಪ್ರದರ್ಶನವನ್ನು ಕಂಡಿದೆ. ಅದಾನಿ ಎಂಟರ್ಪ್ರೈಸಸ್ನ ಷೇರುಗಳು ಜೂನ್ 2020ರಿಂದ ಮುಂಬೈನ ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ನಲ್ಲಿ 1000 ಪ್ರತಿಶತಕ್ಕಿಂತ ಹೆಚ್ಚು ಜಿಗಿತ ಕಂಡಿದೆ.