alex Certify ಮುಂಬೈ ಟ್ರೈನ್‌ ಬ್ಲಾಸ್ಟ್ ನಡೆದು 16 ವರ್ಷ, ಇಂದಿಗೂ ಮಾಸಿಲ್ಲ ಪೈಶಾಚಿಕ ಕೃತ್ಯದ ಕಹಿ ನೆನಪು‌ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಟ್ರೈನ್‌ ಬ್ಲಾಸ್ಟ್ ನಡೆದು 16 ವರ್ಷ, ಇಂದಿಗೂ ಮಾಸಿಲ್ಲ ಪೈಶಾಚಿಕ ಕೃತ್ಯದ ಕಹಿ ನೆನಪು‌ !

2006 ರಲ್ಲಿ ಇದೇ ದಿನ ಅಂದರೆ ಜುಲೈ 11ರಂದು ಇಡೀ ದೇಶವನ್ನೇ ನಡುಗಿಸುವಂತಹ ಸ್ಫೋಟವೊಂದು ಮುಂಬೈನ ಲೋಕಲ್‌ ಟ್ರೈನ್‌ನಲ್ಲಿ ಸಂಭವಿಸಿತ್ತು. ಆ ಕಹಿ ಘಟನೆಗೆ ಈಗ 16 ವರ್ಷ. ವೆಸ್ಟರ್ನ್‌ ಲೈನ್‌ನ ಸಬರ್ಬನ್‌ ರೈಲ್ವೆಯಲ್ಲಿ 7 ಸರಣಿ ಬಾಂಬ್‌ ಸ್ಫೋಟಗಳು ಸಂಭವಿಸಿದ್ದವು. ಈ ಘಟನೆಯಲ್ಲಿ 200 ಮಂದಿ ಪ್ರಾಣ ಕಳೆದುಕೊಂಡ್ರೆ, ನೂರಾರು ಮಂದಿ ಗಾಯಗೊಂಡಿದ್ದರು.

ಕೇವಲ 11 ನಿಮಿಷಗಳ ಅಂತರದಲ್ಲಿ ಉಗ್ರರು 7 ಬಾಂಬ್‌ಗಳನ್ನು ಸ್ಫೋಟಿಸಿದ್ದರು. ಬಾಂಬ್‌ಗಳನ್ನು ಪ್ರೆಶರ್‌ ಕುಕರ್‌ಗಳಲ್ಲಿಟ್ಟು ಅವುಗಳನ್ನು ಬೇರೆ ಬೇರೆ ಸ್ಥಳದಲ್ಲಿ ಅಡಗಿಸಿ ಈ ಕೃತ್ಯ ಎಸಗಿರುವುದು ನಂತರ ಬೆಳಕಿಗೆ ಬಂದಿತ್ತು. ಉಗ್ರರು ಆರ್‌ಡಿಎಕ್ಸ್‌ ಹಾಗೂ ಅಮೋನಿಯಂ ನೈಟ್ರೇಟ್‌ ಅನ್ನು ಈ ಸ್ಫೋಟಕ್ಕೆ ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಸಂಜೆ ಕಚೇರಿ ಬಿಡುವ ಸಮಯ ಪೀಕ್‌ ಅವರ್‌. ಮುಂಬೈನಲ್ಲಂತೂ ಜನಜಂಗುಳಿ ಇದ್ದೇ ಇರುತ್ತದೆ. ಅದನ್ನೇ ಟಾರ್ಗೆಟ್‌ ಮಾಡಿದ್ದ ಉಗ್ರರು ಸಂಜೆ 6.20ಕ್ಕೆ ಬೋರಿವಿಲಿಗೆ ಹೊರಟಿದ್ದ ರೈಲಿನ ಫಸ್ಟ್‌ ಕ್ಲಾಸ್‌ ಕಂಪಾರ್ಟ್ಮೆಂಟ್‌ನಲ್ಲಿ ಮೊದಲ ಬಾಂಬ್‌ ಅನ್ನು ಸ್ಫೋಟಿಸಿದ್ದರು.

ಇದಾದ ಬಳಿಕ ಬಾಂದ್ರಾ-ಖರ್‌ ರಸ್ತೆ, ಮೀರಾ ರೋಡ್‌-ಭಯಂದರ್‌, ಬೋರಿವಿಲಿ, ಮಾತುಂಗಾ-ಮಾಹಿಮ್‌ ಜಂಕ್ಷನ್‌ ಮತ್ತು ಜೋಗೇಶ್ವರ್‌-ಮಾಹಿಮ್‌ ಜಂಕ್ಷನ್‌ ಮಾರ್ಗದಲ್ಲಿ ಸಂಚರಿಸ್ತಾ ಇದ್ದ ರೈಲುಗಳಲ್ಲಿ ಸ್ಫೋಟ ಸಂಭವಿಸಿತ್ತು. ಇವುಗಳ ಪೈಕಿ ಎರಡು ಬಾಂಬ್‌ಗಳು ನಿಲ್ದಾಣದಲ್ಲೇ ಸ್ಫೋಟಗೊಂಡಿದ್ದವು.

ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ಎಟಿಎಸ್‌ 13 ಮಂದಿಯನ್ನು ಬಂಧಿಸಿತ್ತು. 2007ರಲ್ಲಿ ಪ್ರಕರಣದ ವಿಚಾರಣೆ ಆರಂಭಿಸಿದ್ದ ಸುಪ್ರೀಂ ಕೋರ್ಟ್‌, ಈ ಪೈಕಿ ಓರ್ವ ನಿರಪರಾಧಿಯೆಂದು ಬಿಡುಗಡೆ ಮಾಡಿತ್ತು. ಉಳಿದವರಲ್ಲಿ ಐವರಿಗೆ ಮರಣದಂಡನೆ ವಿಧಿಸಲಾಗಿತ್ತು. ಉಳಿದ 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಮುಂಬೈ ನಗರವನ್ನೇ ನಡುಗಿಸಿದ್ದ ಈ ಉಗ್ರ ಕೃತ್ಯ ನಡೆದು 16 ವರ್ಷಗಳೇ ಕಳೆದಿದ್ದರೂ ಕಹಿ ನೆನಪುಗಳು ಮಾತ್ರ ಹಾಗೇ ಉಳಿದುಕೊಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...