ನೀವು ಚಾರಣ ಪ್ರಿಯರಾಗಿದ್ದರೆ ಮುಂಬೈನ ಕನ್ಹೇರಿ ಗುಹೆಗಳ ಸೊಬಗನ್ನು ಒಮ್ಮೆ ಕಣ್ತುಂಬಿಸಿಕೊಳ್ಳಲೇಬೇಕು. ಅಷ್ಟು ಸೊಗಸಾಗಿದೆ ಇಲ್ಲಿಯ ಸೌಂದರ್ಯ. ಈ ಗುಹೆಗಳು ಮತ್ತು ವರ್ಣಚಿತ್ರಗಳು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಮೇಲೆ ಬೌದ್ಧ ಪ್ರಭಾವವನ್ನು ಹೇಳುತ್ತದೆ.
ಗುಹೆಗಳು ತಮ್ಮ 109 ವಿಶೇಷ ಪ್ರವೇಶ ದ್ವಾರಗಳಿಗೆ ಹೆಸರು ಪಡೆದಿವೆ. ಹೆಚ್ಚಿನ ಗುಹೆಗಳು ಹಿಂದೆ ವಾಸಿಸಲು, ಅಧ್ಯಯನಕ್ಕೆ ಮತ್ತು ಧ್ಯಾನ ಮಾಡುತ್ತಿದ್ದ ತಾಣಗಳಾಗಿದ್ದವು. ಈ ಗುಹೆಗಳು ಕ್ರಿ.ಶ ಒಂದರಿಂದ ಹತ್ತನೆಯ ಶತಮಾನದ ಕಾಲಘಟ್ಟದಲ್ಲಿ ನಿರ್ಮಾಣವಾದವು ಎನ್ನಲಾಗಿದೆ. ಇಲ್ಲಿರುವ ಹಳೆ ಗುಹೆಗಳು ಸರಳ ವಿನ್ಯಾಸದಿಂದ ಇದ್ದರೆ ಹೊಸ ಗುಹೆಗಳು ಅಲಂಕಾರಿಕವಾಗಿವೆ.
ಕನ್ಹೇರಿಯಲ್ಲಿ ಸುಮಾರು 51 ಶಾಸನಗಳು ಮತ್ತು 26 ಶಿಲಾ ಶಾಸನಗಳಿವೆ. ಈ ತಾಣ ಸಾಹಸ ಕ್ರೀಡೆಗೆ ಜನಪ್ರಿಯವಾಗಿದೆ.
ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದಿಂದ ಎರಡು ಗಂಟೆಯ ಚಾರಣದ ಮೂಲಕ ಇಲ್ಲಿಗೆ ತಲುಪಬಹುದು. ಹಸಿರು ಕಾಡಿನ ಜೊತೆ ಜಲಪಾತಗಳನ್ನೂ ಸಮೀಪದಿಂದ ಕಣ್ತುಂಬಿಸಿಕೊಳ್ಳುವ ಅವಕಾಶ ಸಿಗುತ್ತದೆ. ವಾರಾಂತ್ಯದ ಪ್ರವಾಸಕ್ಕೆ ಇದು ಅತ್ಯುತ್ತಮ ತಾಣವಾಗಿದೆ.