ಮೀನುಗಾರಿಕೆ ವಿಚಾರವಾಗಿ ಉಂಟಾದ ವಿವಾದದಲ್ಲಿ ಇಬ್ಬರು ಸಹೋದರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯು ಬಿಹಾರದ ಮುಜಾಫರ್ ನಗರದಲ್ಲಿ ನಡೆದಿದೆ.
ಮೃತರನ್ನು ಸಾಹೇಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬರಿಯಾ ಗ್ರಾಮದ ಪ್ರಾಥಮಿಕ ಕೃಷಿ ಸಾಲ ಸಂಘಗಳ ಅಧ್ಯಕ್ಷ ರಾಜೇಶ್ ಸಹಾನಿ ಅಲಿಯಾಸ್ ಭೋಲಾ ಮತ್ತು ಸಹೋದರ ಮುಕೇಶ್ ಸಹಾನಿ ಎಂದು ಗುರುತಿಸಲಾಗಿದೆ.
ಈ ಹತ್ಯೆಯ ಬಳಿಕ ಘಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಅಧಿಕಾರಿಗಳು ಭದ್ರತಾ ಪಡೆಯನ್ನು ನಿಯೋಜಿಸಿದ್ದಾರೆ.
ಮೀನುಗಾರಿಕೆ ವಿವಾದದಲ್ಲಿ ಇಬ್ಬರು ಸಹೋದರರ ಕೊಲೆಯಾಗಿದೆ ಎಂದು ಸಾಹೇಬ್ಗಂಜ್ ಪೊಲೀಸ್ ಠಾಣೆಯ ಎಎಸ್ಐ ಬ್ರಜ್ ಭೂಷಣ್ ಸಿಂಗ್ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಮೀನುಗಾರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಇದೇ ಜಗಳವು ವಿಕೋಪಕ್ಕೆ ತಿರುಗಿದೆ. ಮುಕೇಶ್ ಸಿಂಗ್ ಹಾಗೂ ರಾಕೇಶ್ ಕೊಳದಲ್ಲಿರುವ ಮೀನುಗಳ ಮೇಲೆ ನಮಗೆ ಕಾನೂನು ಬದ್ಧ ಹಕ್ಕಿದೆ ಎಂದು ವಾದ ಮಾಡಿದ್ದರು.
ಗ್ರಾಮದ ಪ್ರಬಲ ವ್ಯಕ್ತಿಯೊಬ್ಬರು ರಾಕೇಶ್ ಸಹಾನಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇದನ್ನು ಮುಕೇಶ್ ಸಹಾನಿ ತಡೆಯಲು ಯತ್ನಿಸಿದಾಗ ಆತನ ಮೇಲೆಯೂ ಫೈರಿಂಗ್ ಮಾಡಲಾಗಿದೆ ಎನ್ನಲಾಗಿದೆ.