ಬೆಳಿಗ್ಗೆ ತಿಂಡಿಗೆ ಇಡ್ಲಿ ಮಾಡಿರುತ್ತೇವೆ. ಎಲ್ಲಾ ತಿಂದು ಒಂದಷ್ಟು ಇಡ್ಲಿ ಮಿಕ್ಕಿರುತ್ತದೆ. ಇದನ್ನು ಮರು ದಿನ ತಿನ್ನೋದಕ್ಕೆ ಕೆಲವರು ಇಷ್ಟಪಡುವುದಿಲ್ಲ. ಅಂತಹವರು ಸಂಜೆ ಸಮಯಕ್ಕೆ ಮಿಕ್ಕಿದ ಇಡ್ಲಿಯಿಂದ ರುಚಿಕರವಾದ ಇಡ್ಲಿ ಮಂಚೂರಿಯನ್ ಮಾಡಿಕೊಂಡು ಸವಿಯಬಹುದು.
3-ಮಿಕ್ಕಿದ ಇಡ್ಲಿ, ¾ ಟೀ ಸ್ಪೂನ್ ಅಕ್ಕಿ ಹಿಟ್ಟು, ½ ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ, ಬೆಣ್ಣೆ-ಸ್ವಲ್ಪ, 4- ಬೆಳ್ಳುಳ್ಳಿ ಎಸಳು, 1-ಈರುಳ್ಳಿ, 1-ಕ್ಯಾಪ್ಸಿಕಂ, ¾ ಟೀ ಸ್ಪೂನ್-ಮೈದಾ ಹಿಟ್ಟು, ಉಪ್ಪು ರುಚಿಗೆ ತಕ್ಕಷ್ಟು. 1 ಟೇಬಲ್ ಸ್ಪೂನ್ ಟೊಮೆಟೊ ಸಾಸ್, 1 ಟೇಬಲ್ ಸ್ಪೂನ್ ಚಿಲ್ಲಿ ಸಾಸ್, 1 ಟೇಬಲ್ ಸ್ಪೂನ್ ಸೋಯಾ ಸಾಸ್, ¼ ಕಪ್ ಸ್ಪ್ರಿಂಗ್ ಆನಿಯನ್.
ಮಾಡುವ ವಿಧಾನ: ಮೊದಲಿಗೆ ಮಿಕ್ಕಿದ ಇಡ್ಲಿಯನ್ನು 4 ಗಂಟೆ ಅಥವಾ ಇಡೀ ರಾತ್ರಿ ಫ್ರಿಡ್ಜ್ ನಲ್ಲಿಡಿ. ನಂತರ ಇದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಖಾರದ ಪುಡಿ, ಅಕ್ಕಿ ಹಿಟ್ಟುಅನ್ನು ಸಿಂಪಡಿಸಿಕೊಳ್ಳಿ. ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಅದನ್ನು ಬಿಸಿ ಮಾಡಿಕೊಳ್ಳಿ. ಇದಕ್ಕೆ ಇಡ್ಲಿ ಹಾಕಿ ಫ್ರೈ ಮಾಡಿಕೊಳ್ಳಿ. ಹೀಗೆ ಹುರಿದಿಟ್ಟುಕೊಂಡ ಇಡ್ಲಿಯನ್ನು ಒಂದು ಪ್ಲೇಟ್ ಗೆ ಹಾಕಿ ಒಂದು ಕಡೆ ಇಡಿ. ಈರುಳ್ಳಿ ಹಾಗೂ ಕ್ಯಾಪ್ಸಿಕಂ ಅನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ.
ನಂತರ ಒಂದು ಪ್ಯಾನ್ ಗೆ 2 ಟೇಬಲ್ ಸ್ಪೂನ್ ಬೆಣ್ಣೆ ಹಾಕಿಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ, ಹಸಿಮೆಣಸು ಈರುಳ್ಳಿ ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ಇದಕ್ಕೆ ಕ್ಯಾಪ್ಸಿಕಂ ಹಾಕಿ 5 ನಿಮಿಷ ಬೇಯಲಿ, ಇದಾದ ನಂತರ ಸಾಸ್ ಗಳನ್ನೆಲ್ಲಾ ಸೇರಿಸಿ ಉಪ್ಪು ಸೇರಿಸಿ 2 ನಿಮಿಷ ಕೈಯಾಡಿಸಿ.
ನಂತರ ಮೈದಾಕ್ಕೆ 2-3 ಟೇಬಲ್ ಸ್ಪೂನ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಈರುಳ್ಳಿ, ಕ್ಯಾಪ್ಸಿಕಂ ಇರುವ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ಇದರ ಮಸಾಲೆ ದಪ್ಪಗಾಗುವರೆಗೆ ಕುದಿಸಿ. ನಂತರ ಇದಕ್ಕೆ ಹುರಿದಿಟ್ಟುಕೊಂಡ ಇಡ್ಲಿ ಸೇರಿಸಿ ಮಿಶ್ರಣ ಮಾಡಿ. ಕೊತ್ತಂಬರಿಸೊಪ್ಪು, ಈರುಳ್ಳಿ ಸೊಪ್ಪು ಹಾಕಿ ಅಲಂಕರಿಸಿದರೆ ಸಂಜೆಗೆ ರುಚಿಕರವಾದ ಸ್ನ್ಯಾಕ್ಸ್ ಸವಿಯಲು ಸಿದ್ಧ.