72 ವರ್ಷದ ವೃದ್ಧೆಯ ಕತ್ತು ಹಿಸುಕಿ ಕೊಂದು ಮನೆಯಲ್ಲಿ 20 ಸಾವಿರ ರೂಪಾಯಿ ಹಣವನ್ನು ಕದ್ದು ದೋಚಿ ಪರಾರಿಯಾಗಿದ್ದ 18 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಮುಲ್ತಾನ್ ನಗರದಲ್ಲಿ ಈ ಪ್ರಕರಣ ವರದಿಯಾದ ಕೇವಲ ನಾಲ್ಕು ಗಂಟೆಗಳಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಯುವಕನನ್ನು ಪೊಲೀಸರು ಮಧ್ಯಪ್ರದೇಶದ ಸಾಗರ್ ನಿವಾಸಿ ರೋಹಿತ್ ದುಬೆ ಎಂದು ಗುರುತಿಸಿದ್ದಾರೆ. ಈತ ವೃದ್ಧೆಯ ಪುತ್ರನಿಗೆ ಸೇರಿದ್ದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಬುಧವಾರ ನಸುಕಿನ ಜಾವ 1 ಗಂಟೆ ಸುಮಾರಿಗೆ ಪಶ್ಚಿಮ ವಿಹಾರ್ನಲ್ಲಿರುವ ಬಾಲಾಜಿ ಆ್ಯಕ್ಷನ್ ಆಸ್ಪತ್ರೆಯಿಂದ ಪೊಲೀಸರು ಸರೋಜ್ ಜೈನ್ ಎಂಬ ವೃದ್ಧೆ ಕತ್ತು ಹಿಸುಕಿ ಕೊಲೆಯಾಗಿರುವ ಮಾಹಿತಿಯನ್ನು ಪಡೆದಿದ್ದಾರೆ. ಪೊಲೀಸರು ವೃದ್ಧೆಯ ಪುತ್ರ ತನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಹೇಳಿದ್ದಾರೆ. ಇದಾದ ಬಳಿಕ ಪೊಲೀಸರು ಮನೀಶ್ ಜೈನ್ನನ್ನು ವಿಚಾರಣೆ ನಡೆಸಿದ್ದಾರೆ. ಆಗ ಅವರಿಗೆ ಘಟನೆಯ ಬಗ್ಗೆ ಮಾಹಿತಿ ತಿಳಿದಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಡಿಸಿಪಿ ಪರ್ವೀಂದರ್ ಸಿಂಗ್, ರೋಹಿತ್ ದುಬೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಂಗಡಿಗೆ ನಾನೇ ಮಾಲೀಕನಾಗಿದ್ದೆ ಎಂದು ಮನೀಶ್ ಜೈನ್ ಹೇಳಿದ್ದಾರೆ. ಬುಧವಾರದಂದು ಮನೀಷ್ ತಾಯಿ ಒಬ್ಬರೇ ಮನೆಯಲ್ಲಿ ಇದ್ದ ವೇಳೆಯಲ್ಲಿ ದುಬೆ ಮುಲ್ತಾನ್ ನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದಾನೆ. ಮನೆಗೆ ನುಗ್ಗಿ 20 ಸಾವಿರ ರೂಪಾಯಿ ಕಳುವು ಮಾಡಿದ್ದಾನೆ. ಇದನ್ನು ಗಮನಿಸಿದ ಸರೋಜ್, ದುಬೆಯನ್ನು ತಡೆಯಲು ಯತ್ನಿಸಿದಾಗ ಆತ ಕತ್ತು ಹಿಸುಕಿ ವೃದ್ಧೆಯ ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ ಎಂದು ಹೇಳಿದರು.