ಅನ್ನದ ಜತೆ ಚಟ್ನಿ ಇದ್ದರೆ ಊಟ ಮಾಡಲು ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಬದನೆಕಾಯಿ ಬಳಸಿ ಮಾಡಲು ರುಚಿಯಾದ ಚಟ್ನಿ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು: 1- ಬದನೇಕಾಯಿ, 1- ಕಪ್ ಕಾಯಿತುರಿ, 2 ರಿಂದ 3 ಎಸಳು ಬೆಳ್ಳುಳ್ಳಿ, 1/2 ಚಮಚ – ಧನಿಯಾ, ಒಂದು ಲಿಂಬೆ ಹಣ್ಣಿನ ಗಾತ್ರದ ಹುಣಸೆಹಣ್ಣು, 3 ರಿಂದ 4- ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಬದನೆಕಾಯಿಯನ್ನು ಸುಟ್ಟು ಅದರ ಸಿಪ್ಪೆ ತೆಗೆಯಬೇಕು(ಬದನೆಕಾಯಿಯನ್ನು ಸ್ಟವ್ ಬೆಂಕಿಗೆ ಹಿಡಿದರೆ ಅದರ ಮೇಲಿನ ಸಿಪ್ಪೆ ಸುಲಭದಲ್ಲಿ ತೆಗೆಯಲು ಬರುತ್ತದೆ. ಬೆಂಕಿಯ ಕಾವಿಗೆ ಬದನೆಕಾಯಿ ಕೂಡ ಹದವಾಗಿ ಬೇಯಬೇಕು) ನಂತರ ಸಿಪ್ಪೆ ತೆಗೆದ ಬದನೆಕಾಯಿ ಮತ್ತು ಧನಿಯಾ, ಕಾಯಿತುರಿ, ಬೆಳ್ಳುಳ್ಳಿ, ಹಸಿಮೆಣಸು, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿದರೆ ಬಲು ರುಚಿಯಾದ ಬದನೆಕಾಯಿ ಚಟ್ನಿ ರೆಡಿ.