ದಕ್ಷಿಣ ದೆಹಲಿಯ ಕೆಫೆಯೊಂದರಲ್ಲಿ ಜನಾಂಗೀಯ ಕಿರುಕುಳಕ್ಕೆ ಒಳಗಾದ ಕಹಿ ಘಟನೆಯನ್ನು ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನು ಯಾವೆಲ್ಲ ರೀತಿಯಲ್ಲಿ ಸಂಕಟವನ್ನು ಅನುಭವಿಸಿದೆ ಎಂಬುದನ್ನು ಮಹಿಳೆಯು ಟ್ವಿಟರ್ನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಜೆಎನ್ಯು ವಿಶ್ವವಿದ್ಯಾಲಯದ ಲೇಖಕಿ ಹಾಗೂ ಪಿಹೆಚ್ಡಿ ವಿದ್ಯಾರ್ಥಿನಿಯಾಗಿರುವ ನ್ಗುರಾಂಗ್ ರೀನಾ ದಕ್ಷಿಣ ದೆಹಲಿಯ ಕೆಫೆಯಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ನನಗೆ ಇಬ್ಬರು ಜನಾಂಗೀಯ ನಿಂದನೆಯನ್ನು ಮಾಡಿದ್ದಾರೆ ಎಂದು ರೀನಾ ಹೇಳಿಕೊಂಡಿದ್ದಾರೆ.
ದಕ್ಷಿಣ ದೆಹಲಿಯ ಆ ಕೆಫೆಯಲ್ಲಿ ಇಬ್ಬರು ಭಾರತೀಯ ಧರ್ಮಾಂಧರು ಕಳೆದ ತಿಂಗಳು ನನಗೆ ಜನಾಂಗೀಯ ಕಿರುಕುಳವನ್ನು ನೀಡಿದ ಬಳಿಕ ನಾನು ಆ ಕೆಫೆಗೆ ತೆರಳುವುದನ್ನೇ ಬಿಟ್ಟಿದ್ದೇನೆ. ನಿನ್ನೆ ಓರ್ವ ವ್ಯಕ್ತಿ ನನ್ನನ್ನು ಸಾರ್ವಜನಿಕ ಉದ್ಯಾನವನದಲ್ಲಿ ಹಿಂಬಾಲಿಸಿದ್ದಾರೆ. ನನ್ನ ಮೇಲೆ ಬಲವಂತವಾಗಿ ಮುಗಿ ಬಿದ್ದಿದ್ದಾರೆ. ನಾನು ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನೇ ನಿಲ್ಲಿಸಬೇಕೆ..? ನನ್ನನ್ನು ನಾನು ಮನೆಯಲ್ಲಿಯೇ ಬಂಧಿ ಮಾಡಿಕೊಳ್ಳಬೇಕೆ ಎಂದು ಮಹಿಳೆ ಪ್ರಶ್ನಿಸಿದ್ದಾರೆ.
ನನಗೆ ತಿಳಿದ ಮಟ್ಟಿಗೆ ಬಹುತೇಕ ಎಲ್ಲಾ ಮಹಿಳೆಯರು ಪ್ರತಿದಿನ ಇಂತಹ ಕಿರುಕುಳವನ್ನು ಸಹಿಸಿಕೊಳ್ತಿದ್ದಾರೆ. ನಮ್ಮ ದುರ್ಬಲತೆಗಳು ನಮ್ಮನ್ನು ಈ ರೀತಿ ಮಾಡುತ್ತಿದೆ ಎಂದು ನನಗೆ ಮನವರಿಕೆಯಾಗಿದೆ ಎಂದು ಟ್ವಿಟರ್ನಲ್ಲಿ ರೀನಾ ಬರೆದುಕೊಂಡಿದ್ದಾರೆ.
ರೀನಾರ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ರೀನಾ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ. ಓರ್ವ ನೆಟ್ಟಿಗ ತಡರಾತ್ರಿ ಎಲ್ಲೆಂದರಲ್ಲಿ ತಿರುಗಾಡದಂತೆ ಮನವಿ ಮಾಡಿದ್ದಾರೆ.
ನೀವು ತಡರಾತ್ರಿ ಅಪರಿಚಿತ ರಸ್ತೆಗಳಲ್ಲಿ ತಿರುಗಾಡುವುದನ್ನು ನಿಲ್ಲಿಸಬೇಕು. ನಿಮ್ಮನ್ನು ನೀವು ಸುರಕ್ಷಿತ ಸ್ಥಳದಲ್ಲಿಯೇ ಇರುವಂತೆ ನೋಡಿಕೊಳ್ಳಿ. ನೀವು ಭಾರತದಲ್ಲಿ ಸಂತೋಷದಿಂದ ಇರಬೇಕು ಎಂದು ನಾವು ಬಯಸುತ್ತೇವೆ ಎಂದು ಸನತ್ ಕುಮಾರ್ ಪಾಲ್ ಬರೆದಿದ್ದಾರೆ.
ಸನತ್ರ ಈ ಕಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ರೀನಾ ಬೇರೆ ದೇಶದ ಮಹಿಳೆಯಲ್ಲ. ಅವರು ಅರುಣಾಚಲ ಪ್ರದೇಶದವರು. ಸುರಕ್ಷಿತವಾಗಿರಬೇಕೆಂದು ಮಹಿಳೆಯು ತನ್ನನ್ನು ತಾನು ನಿರ್ಬಂಧಿಸಿಕೊಳ್ಳಬೇಕಿಲ್ಲ ಎಂದು ಟಾಂಗ್ ನೀಡಿದ್ದಾರೆ.