ಭಾರತದಾದ್ಯಂತ ಮಾನ್ಸೂನ್ ಎಂಟ್ರಿ ಕೊಟ್ಟಿದೆ. ಜನರು ಬಿರುಬಿಸಿಲು ಮತ್ತು ಸೆಖೆಯಿಂದ ಪಾರಾಗಿದ್ದಾರೆ. ಋತುಮಾನ ಬದಲಾದಂತೆ ನಮ್ಮ ಆಹಾರದಲ್ಲಿ ಕೂಡ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಅದರಲ್ಲೂ ಪ್ರಮುಖವಾಗಿ ಡೈರಿ ಉತ್ಪನ್ನಗಳ ಸೇವನೆಯಲ್ಲಿ ಕಾಳಜಿ ವಹಿಸಬೇಕು. ಸಾಮಾನ್ಯವಾಗಿ ನಾವು ಆರೋಗ್ಯಕರ ಆಹಾರದಲ್ಲಿ ಹಾಲು ಮತ್ತು ಮೊಸರನ್ನು ಪರಿಗಣಿಸುತ್ತೇವೆ, ಆದರೆ ಮಳೆಗಾಲದಲ್ಲಿ ಹಾಲು ಮತ್ತು ಮೊಸರಿನ ಸೇವನೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಇವುಗಳ ಸೇವನೆಯನ್ನು ಕಡಿಮೆ ಮಾಡಬೇಕು ಎನ್ನುತ್ತಾರೆ ತಜ್ಞರು.
ರೋಗಾಣು – ಮಳೆಗಾಲದಲ್ಲಿ ಹಸಿರು ಹೆಚ್ಚುತ್ತದೆ. ಹಸಿರು ಹುಲ್ಲಿನ ಜೊತೆಗೆ ಅನೇಕ ಕಳೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಅದರಲ್ಲಿ ಕೀಟಗಳು ಸಹ ಸೇರಿಕೊಳ್ಳುತ್ತವೆ. ಹಸು, ಎಮ್ಮೆ, ಮೇಕೆಗಳೆಲ್ಲ ಈ ಹುಲ್ಲನ್ನೇ ಮೇವಾಗಿ ತಿನ್ನುತ್ತವೆ. ಇದರ ಪರಿಣಾಮವೆಂದರೆ ಹುಲ್ಲಿನ ಮೂಲಕ ಹಾಲು ನೀಡುವ ಪ್ರಾಣಿಗಳ ಹೊಟ್ಟೆಯನ್ನು ರೋಗಾಣುಗಳು ತಲುಪುತ್ತವೆ. ನಂತರ ಹಾಲಿನ ಮೂಲಕ ಅವು ನಮ್ಮ ದೇಹಕ್ಕೆ ಸೇರುತ್ತವೆ. ಹಾಗಾಗಿ ಮಾನ್ಸೂನ್ ಮುಗಿಯುವವರೆಗೆ ಹಾಲಿನ ಉತ್ಪನ್ನಗಳಿಂದ ದೂರವಿರುವುದು ಉತ್ತಮ.
ಜೀರ್ಣಕ್ರಿಯೆ ಸಮಸ್ಯೆ – ಮಳೆಗಾಲದಲ್ಲಿ ಸಾಮಾನ್ಯವಾಗಿ ಜೀರ್ಣಕ್ರಿಯೆ ಸರಿಯಾಗಿರುವುದಿಲ್ಲ. ಹೆಚ್ಚು ಕೊಬ್ಬಿನಂಶವಿರುವ ಹಾಲನ್ನು ಸೇವಿಸಿದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹೊಟ್ಟೆ ನೋವು, ಗ್ಯಾಸ್, ಭೇದಿ, ವಾಂತಿ ಮುಂತಾದ ತೊಂದರೆಗಳೂ ಉಂಟಾಗಬಹುದು.
ಶೀತ ಮತ್ತು ಜ್ವರದ ಅಪಾಯ – ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ಮೊಸರು ತಿನ್ನಲು ಸಲಹೆ ನೀಡಲಾಗುತ್ತದೆ, ಏಕೆಂದರೆ ಇದು ಹೊಟ್ಟೆಯನ್ನು ತಂಪಾಗಿರಿಸುತ್ತದೆ ಮತ್ತು ಯಾವುದೇ ಜೀರ್ಣಕಾರಿ ತೊಂದರೆಗಳನ್ನು ಉಂಟುಮಾಡುವುದಿಲ್ಲ. ಆದರೆ ಮಳೆಗಾಲದಲ್ಲಿ ಹವಾಮಾನವು ತಂಪಾಗುತ್ತದೆ. ನಾವು ಹೆಚ್ಚು ತಣ್ಣನೆಯ ವಸ್ತುಗಳನ್ನು ಸೇವಿಸಿದರೆ ಶೀತ ಮತ್ತು ಜ್ವರ ಬರುವ ಸಾಧ್ಯತೆ ಇರುತ್ತದೆ.