ಮಳೆಗಾಲದಲ್ಲಿ ದೇಹ ಥಂಡಿಯಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಉಪ್ಪು – ಖಾರ ಬಳಸಿದ ತಿನಿಸುಗಳನ್ನು ನಾವು ಸೇವಿಸುತ್ತೇವೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ವಿಪರೀತ ಹೆಚ್ಚಿ ಹೊಟ್ಟೆ ಉಬ್ಬರಿಸಿ, ಹುಳಿ ತೇಗು ಬರುತ್ತದೆ. ಕೆಲವೊಮ್ಮ ವಾಕರಿಕೆ ಲಕ್ಷಣಗಳೂ ಕಂಡು ಬಂದಾವು. ಇದರ ಪರಿಹಾರಕ್ಕೆ ಒಂದಷ್ಟು ಮನೆ ಮದ್ದುಗಳು ಇಲ್ಲಿವೆ.
ತಣ್ಣಗಿನ ಹಾಲು ಕುಡಿಯುವುದು ಗ್ಯಾಸ್ಟ್ರಿಕ್ ಗೆ ಹೇಳಿ ಮಾಡಿಸಿದ ಮದ್ದು. ಆದು ಖಾಲಿ ಹೊಟ್ಟೆಗಾದರೆ ಮತ್ತೂ ಒಳ್ಳೆಯದು. ಹಾಲಿನಲ್ಲಿ ಇರುವ ಕ್ಯಾಲ್ಸಿಯಂ ಅಂಶ ಹೆಚ್ಚಿನ ಪ್ರಮಾಣದ ಆಮ್ಲವನ್ನು ಹೀರಿಕೊಳ್ಳುತ್ತದೆ. ಇದಕ್ಕೆ ಸಕ್ಕರೆ ಹಾಕದೆ ಕುಡಿಯುವುದರಿಂದ ಅಸಿಡಿಟಿ ತಕ್ಷಣ ಕಡಿಮೆಯಾಗುತ್ತದೆ.
ಹೊಟೇಲ್ ಗಳಲ್ಲಿ ಊಟವಾದ ಬಳಿಕ ಸೋಂಪು ತಿನ್ನಲು ಇಟ್ಟಿರುವುದನ್ನು ನೀವು ಗಮನಿಸಿರಬಹುದು. ಉಟದ ಬಳಿಕ ಇದನ್ನು ಜಗಿದು ರಸ ಕುಡಿಯುವುದರಿಂದ ಕರುಳಿನಲ್ಲಿ ಜೀರ್ಣವಾಗದೆ ಉಳಿದಿರುವ ವಸ್ತುಗಳಿಗೆ ಮುಕ್ತಿ ದೊರೆಯುತ್ತದೆ. ಇದರಿಂದ ಅಜೀರ್ಣ ಸಮಸ್ಯೆಯು ಕಾಡುವುದಿಲ್ಲ. ಹೊಟ್ಟೆಯುಬ್ಬರ ಮತ್ತು ಹೊಟ್ಟೆನೋವು ಕಡಿಮೆಯಾಗುತ್ತದೆ.
ನೀವು ನಿತ್ಯ ತಯಾರಿಸುವ ಚಹಾಗೆ ಒಂದಿಂಚು ಗಾತ್ರದ ಶುಂಠಿಯನ್ನು ಜಜ್ಜಿ ಹಾಕಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಶುಂಠಿಗೆ ಜೀರ್ಣ ಮಾಡುವ ಗುಣವಿದ್ದು, ಇದು ಅಜೀರ್ಣಕಾರಿ ಅಂಶಗಳನ್ನು ದೂರವಿಡುತ್ತದೆ. ಒಂದು ಲೋಟ ತಣ್ಣಗಿನ ಮಜ್ಜಿಗೆಯೂ ಬಲುಪಯೋಗಿ. ರುಚಿ ಹೆಚ್ಚಿಸಲು ತುಸುವೇ ಉಪ್ಪು, ಇಂಗು, ಕೊತ್ತಂಬರಿ ಎಲೆ ಕತ್ತರಿಸಿ ಹಾಕಿ ಕುಡಿಯಿರಿ.
ತುಳಸಿ ಎಲೆಗಳ ಕಷಾಯವೂ ಅಸಿಡಿಟಿ ಸಮಸ್ಯೆಯನ್ನು ದೂರವಿಡುತ್ತದೆ. ಒಂದು ಲೋಟ ನೀರಿಗೆ ಐದು ಎಲೆ ತುಳಸಿ ಹಾಕಿ ಚೆನ್ನಾಗಿ ಕುದಿಸಿ ಕುಡಿಯಿರಿ. ಇಲ್ಲವಾದರೆ ಎರಡು ತುದಿಯನ್ನು ಕತ್ತರಿಸಿ ಸ್ವಚ್ಛಗೊಳಿಸಿ ಬಾಯಿಯಲ್ಲಿ ಹಾಕಿ ಜಗಿದರೂ ಸಾಕು. ಈ ಸಮಸ್ಯೆ ದೂರವಾಗುತ್ತದೆ.