ನಾವೆಲ್ಲ ಚಿಕ್ಕವರಿದ್ದಾಗ ಪಾಕೆಟ್ ಮನಿ ಜಾಸ್ತಿ ಅಂದ್ರೆ 5-10 ರೂ. ಅಷ್ಟೇ ಸಿಗೋದು. ಅದಕ್ಕಿಂತ ಹೆಚ್ಚಿಗೆ ಸಿಕ್ಕರೆ ಅದೇ ದೊಡ್ಡ ಹಬ್ಬ. ಆದರೆ ಇಂದಿನ ಮಕ್ಕಳ ಲೈಫ್ ಸ್ಟೈಲೇ ಬದಲಾಗಿದೆ. ಅವರಿಗೆ ಸ್ಮಾರ್ಟ್ ವಾಚ್, ಹೈ-ಫೈ ಮೊಬೈಲ್, ಆನ್ಲೈನ್ ಗೇಮಿಂಗ್, ಕಾಸ್ಟ್ಲಿ ಟಾಯ್ಸ್, ಇದೇ ಹುಚ್ಚು ಹೆಚ್ಚಾಗಿದೆ. ಅದಕ್ಕೆ ನೋಡಿ ತೆಲಂಗಾಣದ ಇಬ್ಬರು ಮಕ್ಕಳು ತಮ್ಮ ಈ ಹುಚ್ಚಾಸೆಗಳನ್ನ ಈಡೇರಿಸಿಕೊಳ್ಳೊದಕ್ಕಂತಾನೇ ಮನೆಯಲ್ಲಿದ್ದ ಹಣವನ್ನೇ ಲಪಟಾಯಿಸಿದ್ದಾರೆ. ಅದು ಕೂಡಾ ಒಂದೆರಡು ರೂಪಾಯಿ ಅಲ್ಲ…….ಬರೋಬ್ಬರಿ 4 ಲಕ್ಷ ರೂಪಾಯಿ.
ಈ ಘಟನೆ ನಡೆದಿರೋದು ತೆಲಂಗಾಣದಲ್ಲಿ. ಇಲ್ಲಿನ ಜಿದಿಮೆಟಲಾದ, ಎಸ್ಆರ್ ನಾಯಕ್ ನಗರದಲ್ಲಿನ ಮಕ್ಕಳು ಅಪ್ಪ-ಅಮ್ಮ ಮನೆಯ ಕಪಾಟಿನಲ್ಲಿ ಹಣ ಇಟ್ಟಿದ್ದನ್ನ ನೋಡಿದ್ದಾರೆ. ಇದನ್ನ ಉಳಿದ ಸ್ನೇಹಿತರ ಬಳಿಯೂ ಹೇಳಿಕೊಂಡಿದ್ದಾರೆ. ಕೊನೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಅದೇ ಕಪಾಟಿನಲ್ಲಿದ್ದ 4 ಲಕ್ಷ ರೂಪಾಯಿಯನ್ನ ಕದ್ದಿದ್ದಾರೆ. ಮನೆಯಲ್ಲಿ ಯಾರಿಗೂ ಅನುಮಾನ ಬರದೇ ಇರಲೆಂದು ಡುಪ್ಲಿಕೇಟ್ ನೋಟು ಇಟ್ಟಿದ್ದಾರೆ. ಆ ಇಬ್ಬರು ಬಾಲಕರಿಗೆ ಈ ಐಡಿಯಾ ಕೊಟ್ಟಿದ್ದು ಅವರ ಸ್ನೇಹಿತರೇ ಅನ್ನೊದು ಪೊಲೀಸರು ತನಿಖೆ ಮಾಡ್ತಿರುವಾಗ ಬಹಿರಂಗವಾಗಿದೆ.
ಕದ್ದ ಹಣದಲ್ಲಿ ಮಕ್ಕಳು ಗೇಮಿಂಗ್ ಸೆಂಟರ್ ಮತ್ತು ರೆಸ್ಟೊರೆಂಟ್ಗಳಿಗೆ ಹೋಗಿ ಖರ್ಚು ಮಾಡಿದ್ದಾರೆ. ಜೊತೆಗೆ ಸ್ಮಾರ್ಟ್ವಾಚ್ ಹಾಗೂ ಮೊಬೈಲ್ಗಳನ್ನ ಖರೀದಿಸಿದ್ದಾರೆ. ಮಕ್ಕಳ ಬಳಿ ಇಷ್ಟು ಕಾಸ್ಟ್ಲಿ ವಸ್ತುಗಳು ಹೇಗೆ ಬಂದವು ಅನ್ನೋ ಅನುಮಾನ ಪಾಲಕರಿಗೆ ಬಂದಿದೆ. ಕೊನೆಗೆ ಮನೆಯ ಲಾಕರ್ ಚೆಕ್ ಮಾಡಿದಾಗ ಮನೆಯಲ್ಲಿ 4 ಲಕ್ಷ ಮಾಯಮಾಗಿರೋದು ಗೊತ್ತಾಗಿದೆ. ಅದರ ಬದಲು ಡುಪ್ಲಿಕೇಟ್ ನೋಟು ಇಟ್ಟಿರೋದು ಪತ್ತೆಯಾಗಿದೆ. ಮಕ್ಕಳನ್ನ ಬೆದರಿಸಿ ಕೇಳಿದಾಗ ಸತ್ಯಾಂಶ ಹೊರ ಬಿದ್ದಿದೆ.