ಬಿಸಿ ಬಿಸಿಯಾದ ರುಚಿ ರುಚಿಯಾದ ಆಹಾರ ಸೇವನೆ ಮಾಡಲು ಎಲ್ಲರೂ ಬಯಸ್ತಾರೆ. ಹಾಗಾಗಿ ಸಮೋಸಾ, ಕಚೋರಿ, ಫಿಜ್ಜಾ ಹೀಗೆ ಹೊರಗಡೆ ಮಾಡಿದ ಫಾಸ್ಟ್ ಫುಡ್ ಗಳನ್ನು ತಿನ್ನುತ್ತಾರೆ. ಅದ್ರ ಬದಲು ಮನೆಯಲ್ಲಿ ಆರೋಗ್ಯಕರವಾದ ತಿಂಡಿಗಳನ್ನು ಸುಲಭವಾಗಿ ಮಾಡಿ ರುಚಿ ಸವಿಯಬಹುದು. ಮನೆಯಲ್ಲಿ ಸರಳವಾಗಿ ಮಾಡುವ ತಿಂಡಿಗಳಲ್ಲಿ ಪನ್ನೀರ್ ಟಿಕ್ಕಾ ಕೂಡ ಒಂದು.
ಪನ್ನೀರ್ ಟಿಕ್ಕಾ ಮಾಡಲು ಬೇಕಾಗುವ ಪದಾರ್ಥ:
250 ಗ್ರಾಂ ಪನ್ನೀರ್, 2 ದೊಡ್ಡ ಚಮಚ ಟೊಮೊಟೋ ಸಾಸ್, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1/2 ಚಮಚ ಕೆಂಪು ಮೆಣಸಿನ ಪುಡಿ, ¼ ಚಮಚ ಓರೆಗಾನೊ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹುರಿಯಲು ಎಣ್ಣೆ.
ಪನ್ನೀರ್ ಟಿಕ್ಕಾ ಮಾಡುವ ವಿಧಾನ:
ಮೊದಲು ಪನ್ನೀರನ್ನು ಚೌಕವಾಗಿ ಕತ್ತರಿಸಿಕೊಳ್ಳಿ. ನಂತ್ರ ನಾನ್ ಸ್ಟಿಕ್ ಪ್ಯಾನ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ. ನಂತ್ರ ಟೊಮೊಟೋ ಸಾಸ್, ಮೆಣಸಿನ ಪುಡಿ ಹಾಗೂ ಉಪ್ಪನ್ನು ಹಾಕಿ. ಇದಕ್ಕೆ ಕತ್ತರಿಸಿದ ಪನ್ನೀರ್ ಹಾಕಿ ಸರಿಯಾಗಿ ಬೇಯಿಸಿ. ಕೊನೆಯಲ್ಲಿ ಓರೆಗಾನೊ ಹಾಕಿದ್ರೆ ಮುಗೀತು. ಪನ್ನೀರ್ ಟಿಕ್ಕಾ ಸವಿಯಲು ಸಿದ್ಧ.