ಲಕ್ಷ್ಮೀಯನ್ನ ಆರಾಧನೆ ಮಾಡೋದ್ರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತೆ. ಸಂಪತ್ತು ಹೆಚ್ಚಿದ್ರೆ ಮನೆಯಲ್ಲಿ ಸಂತೋಷ ತನ್ನಿಂದ ತಾನಾಗಿಯೇ ನೆಲೆಸುತ್ತೆ. ಹೀಗಾಗಿ ಹೆಚ್ಚಿನ ಮನೆಗಳಲ್ಲಿ ಲಕ್ಷ್ಮೀಯನ್ನ ಅತ್ಯಂತ ವಿಶೇಷವಾಗಿ ಆರಾಧನೆ ಮಾಡುತ್ತಾರೆ. ಆದರೆ ಲಕ್ಷ್ಮೀ ದೇವಿಗೂ ಹಾಗೂ ನಿಮ್ಮ ಅಡುಗೆಗೂ ತುಂಬಾನೇ ಸಂಬಂಧವಿದೆ ಎಂಬುದನ್ನ ನೀವು ಮರೆಯೋ ಹಾಗಿಲ್ಲ. ಹೀಗಾಗಿ ಅಡುಗೆ ಮಾಡುವ ಹಾಗೂ ಆಹಾರ ತಿನ್ನುವ ವಿಚಾರದಲ್ಲಿ ಈ ತಪ್ಪುಗಳನ್ನ ಮಾಡಲೇಬೇಡಿ.
ರಾತ್ರಿ ಹೊತ್ತು ಹಾಲನ್ನ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ಅನೇಕರು ಹೇಳುತ್ತಾರೆ. ಆದರೆ ರಾತ್ರಿ ವೇಳೆ ಮೊಸರನ್ನ ತಿನ್ನೋದು ಒಳ್ಳೆಯ ಅಭ್ಯಾಸವಲ್ಲ. ಮೊಸರಿನಿಂದ ಶೀತ ಬರುವ ಸಾಧ್ಯತೆ ಹೆಚ್ಚಿರೋದ್ರಿಂದ ಮಲಗುವ ಮುನ್ನ ಮೊಸರು ಸೇವನೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತೆ. ಇದರ ಜೊತೆಯಲ್ಲಿ ರಾತ್ರಿ ವೇಳೆ ಅಕ್ಕಿ, ಬಾರ್ಲಿ ಹಾಗೂ ಆಲೂಗಡ್ಡೆಯನ್ನ ಸೇವಿಸೋದು ಕೂಡ ಒಳ್ಳೆಯದಲ್ಲ. ಇದರಿಂದ ಮನೆಯ ನೆಮ್ಮದಿ ನಶಿಸಿ ಹೋಗಲಿದೆ ಎನ್ನುತ್ತೆ ವಾಸ್ತುಶಾಸ್ತ್ರ.
ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದರಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳಿವೆ. ಅದರಲ್ಲೂ ದಿಕ್ಕುಗಳ ವಿಚಾರದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ. ಆಹಾರ ಸೇವಿಸುವ ವೇಳೆ ಎಂದಿಗೂ ಉತ್ತರ ಇಲ್ಲವೇ ಪೂರ್ವದ ಕಡೆ ಮುಖವನ್ನ ಮಾಡಿ. ಚಪ್ಪಲಿಯನ್ನ ಧರಿಸಿಕೊಂಡು ಎಂದಿಗೂ ಆಹಾರವನ್ನ ಸೇವಿಸಲು ಹೋಗಬೇಡಿ. ಆದಷ್ಟು ಅಡುಗೆಮನೆಯಲ್ಲಿಯೇ ಊಟ, ತಿಂಡಿ ಮಾಡಿ. ಇದು ರಾಹುವನ್ನ ಶಾಂತವಾಗಿ ಇರಿಸುತ್ತೆ. ಅಲ್ಲದೇ ಮನೆಯ ಆರ್ಥಿಕ ಪರಿಸ್ಥಿತಿ ಕೂಡ ಹಿಡಿತದಲ್ಲಿ ಇರಲಿದೆ.
ಅನೇಕ ಮಂದಿ ಸ್ನಾನವಾದ ಬಳಿಕ ಅಡುಗೆ ಮಾಡ್ತಾರೆ. ಇದು ಖಂಡಿತವಾಗಿಯೂ ಒಳ್ಳೆಯ ಅಭ್ಯಾಸ. ಸ್ನಾನ ಮಾಡಿ ಶುಭ್ರ ಬಟ್ಟೆಯಲ್ಲಿ ದೇವರನ್ನ ಆರಾಧಿಸಿ ಬಳಿಕ ಅಡುಗೆ ಆರಂಭಿಸಿ. ಅಲ್ಲದೇ ಅಡುಗೆಯಾದ ಬಳಿಕ ಮೊದಲ ಮೂರು ಚಮಚ ಆಹಾರವನ್ನ ಹಸು, ಶ್ವಾನ ಹಾಗೂ ಕಾಗೆಗೆ ನೀಡಬೇಕು. ಇದಾದ ಬಳಿಕ ಅಗ್ನಿ ದೇವನಿಗೆ ಅಡುಗೆಯನ್ನ ಅರ್ಪಿಸಿ ನಂತರ ಮನೆಯ ಸದಸ್ಯರಿಗೆ ಊಟವನ್ನ ಬಡಿಸಿ.
ಊಟವನ್ನ ಎಂದಿಗೂ ಬರಿಗೈಯಲ್ಲಿ ಇಲ್ಲವೇ ಒಡೆದ ತಟ್ಟೆಯಲ್ಲಿ ತಿನ್ನಬೇಡಿ. ಇದರಿಂದ ಮನೆಯಲ್ಲಿ ಋಣಾತ್ಮಕ ಅಂಶ ಮನೆ ಮಾಡಲಿದೆ. ಹಾಗೂ ಆದಷ್ಟು ಆಹಾರವನ್ನ ವ್ಯರ್ಥ ಮಾಡುವ ಅಭ್ಯಾಸವನ್ನ ಕಡಿಮೆ ಮಾಡಿ.