ಮನಸಿದ್ದಲ್ಲಿ ಮಾರ್ಗ ಎಂಬ ಮಾತಿದೆ. ಬಿಹಾರದ ನವಾಡ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯು ಐಐಟಿ 2022ರ ಜಂಟಿ ಪ್ರವೇಶಾತಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 54 ನೇ ರ್ಯಾಂಕ್ ಗಳಿಸುವ ಮೂಲಕ ಈ ಮಾತನ್ನು ಸಾಬೀತುಪಡಿಸಿದ್ದಾರೆ. ಕೈದಿ ಸೂರಜ್ ಕುಮಾರ್ ಎಂಬವರು ಐಐಟಿ – ಜೆಎಎಂ ಪರೀಕ್ಷೆಯಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಐಐಟಿಗಳಲ್ಲಿ ಮಾಸ್ಟರ್ ಆಫ್ ಸೈನ್ಸ್ ಸೇರಿದಂತೆ ಇತರೆ ಯಾವುದೇ ಸ್ನಾತಕೋತ್ತರ ವಿಜ್ಞಾನ ಪದವಿಗಳಿಗೆ ಪ್ರವೇಶ ಪಡೆಯಲು ಇದು ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದೆ. ಸರಿ ಸುಮಾರು ಒಂದು ವರ್ಷಗಳಿಂದ ಜೈಲಿನಲ್ಲಿರುವ ಸೂರಜ್ ತನ್ನ ಛಲವನ್ನು ಬಿಡದೇ ಜೈಲಾಧಿಕಾರಿಗಳು ಹಾಗೂ ವಿದ್ಯಾವಂತ ಕೈದಿಗಳ ಸಹಾಯದಿಂದ ತಮ್ಮ ಅಧ್ಯಯನವನ್ನು ಮುಂದುವರಿಸಿದರು.
ವಾರ್ಸಾಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಮೊಸ್ಮಾ ಗ್ರಾಮದ ನಿವಾಸಿ ಸೂರಜ್ ಸೇರಿದಂತೆ ಇತರೆ 10 ಮಂದಿ ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅವರ ಗ್ರಾಮದ ಒಳಚರಂಡಿ ವಿಚಾರದಲ್ಲಿ ಉಂಟಾದ ವಿವಾದದಲ್ಲಿ ಸಂಜಯ್ ಯಾದವ್ ಎಂಬವರು ಮೃತಪಟ್ಟಿದ್ದರು. ಇದಾದ ಬಳಿಕ ಮೃತರ ಪುತ್ರ ನೀಡಿದ ದೂರನ್ನು ಆಧರಿಸಿ ಸೂರಜ್ರನ್ನು ಬಂಧಿಸಲಾಗಿದೆ.