ಯುವಕನೊಬ್ಬ ಮಧ್ಯರಾತ್ರಿ ವೇಳೆಯಲ್ಲಿ ನೋಯ್ಡಾ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಓಡುತ್ತಿದ್ದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಲಕ್ಷಗಟ್ಟಲೇ ವೀವ್ಸ್ ಸಂಪಾದಿಸಿದೆ. ನಿರ್ಮಾಪಕ ಹಾಗೂ ಲೇಖಕ ವಿನೋದ್ ಕಪ್ರಿ ಈ ವಿಡಿಯೋವನ್ನು ಚಿತ್ರೀಕರಿಸಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ಯುವಕ ಈ ರೀತಿ ರಸ್ತೆಯಲ್ಲಿ ಓಡುವ ಹಿಂದಿನ ಕಾರಣ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. 19 ವರ್ಷದ ಪ್ರದೀಪ್ ಮೆಹ್ರಾ ಮುಂದೆ ಸೇನೆಯನ್ನು ಸೇರಬೇಕೆಂಬ ಕಾರಣದಿಂದ ಪ್ರತಿನಿತ್ಯ ತಾನು 10 ಕಿಮೀ ಓಡಿಕೊಂಡೇ ಕೆಲಸದ ಸ್ಥಳದಿಂದ ಮನೆಗೆ ಸಾಗುತ್ತೇನೆ ಎಂದು ಹೇಳಿದ್ದಾರೆ.
ವಿನೋದ್ ಕಪ್ರಿ ಡ್ರಾಪ್ ನೀಡುತ್ತೇನೆ ಎಂದರೂ ಸಹ ನಿರಾಕರಿಸಿದ ಯುವಕ ನಿಮ್ಮ ಬಳಿ ಡ್ರಾಪ್ ತೆಗೆದುಕೊಂಡರೆ ನನ್ನ ಅಭ್ಯಾಸ ತಪ್ಪುತ್ತದೆ ಎಂದು ಹೇಳಿದ್ದಾನೆ. ಅಲ್ಲದೇ ಊಟ ಮಾಡಲೂ ಇಲ್ಲ ಎಂದ ಯುವಕ ನಾನು ಮನೆಗೆ ಹೋಗಿ ಅಡುಗೆ ಮಾಡಿ ಅಣ್ಣನಿಗೆ ಊಟ ಬಡಿಸಬೇಕು. ನಾನು ನಿಮ್ಮ ಜೊತೆ ಊಟ ಮಾಡಿದರೆ ಅಣ್ಣ ಉಪವಾಸ ಇರಬೇಕಾಗುತ್ತದೆ ಎಂದು ಹೇಳಿದ್ದಾನೆ.
ಈ ವಿಡಿಯೋ ವೈರಲ್ ಆದರೆ ಏನು ಮಾಡುತ್ತಿ ಎಂಬ ಕಪ್ರಿ ಪ್ರಶ್ನೆಗೂ ಬಹಳ ಸೌಮ್ಯವಾಗೇ ಉತ್ತರಿಸಿದ ಯುವಕ, ನಾನೇನು ತಪ್ಪು ಕೆಲಸ ಮಾಡುತ್ತಿಲ್ಲ ಎಂದಮೇಲೆ ಚಿಂತೆ ಏಕೆ ಎಂದು ಹೇಳಿದ್ದಾನೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಸಂಪಾದಿಸಿದೆ.
https://twitter.com/i/status/1505535421589377025