ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗ್ತಾನೇ ಇರುತ್ತೆ. ಇದೇ ಕಾರಣಕ್ಕಾಗಿ ಭಾರತವನ್ನ ವಿಶ್ವ ಮಧುಮೇಹಿಗಳ ರಾಜಧಾನಿ ಎಂದೇ ಕರೆಯುತ್ತಾರೆ. ದೇಶದಲ್ಲಿ ಅಧಿಕ ಮಂದಿ ಡಯಾಬಿಟೀಸ್ನಿಂದ ಬಳಲುತ್ತಿದ್ದಾರೆ. ಆದರೆ ಅನೇಕ ತಜ್ಞರ ಅಭಿಪ್ರಾಯದಂತೆ ಯೋಗಾಸನವು ಮಧುಮೇಹವನ್ನ ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಂತೆ. ಹಾಗಿದ್ದಲ್ಲಿ ಡಯಾಬಿಟೀಸ್ ಕಂಟ್ರೋಲ್ ಮಾಡೋಕೆ ಯಾವೆಲ್ಲ ಯೋಗ ಮಾಡಬೇಕು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
ಧನುರಾಸನ : ಧನಸ್ಸಿನಂತೆ ದೇಹವನ್ನ ಮಾರ್ಪಾಡು ಮಾಡುವ ಆಸನವೇ ಧನುರಾಸನ. ಇದಕ್ಕಾಗಿ ನೀವು ಹೊಟ್ಟೆಯಡಿಯಾಗಿ ಮಲಗಬೇಕು. ಕಾಲನ್ನ ಬೆನ್ನಿನ ಕಡೆಗೆ ಬಾಗಿಸಿ ಹಿಮ್ಮಡಿಯನ್ನ ಕೈನಿಂದ ಹಿಡಿದುಕೊಳ್ಳಿ. ಈ ರೀತಿ 15-20 ಸೆಕೆಂಡ್ಗಳ ಕಾಲ ಇರಬೇಕು. ಈ ಆಸನದಲ್ಲಿ ಇರುವಾಗ ನಿಧಾನವಾಗಿ ಉಸಿರಾಟವನ್ನ ಮಾಡಿ.
ಚಕ್ರಾಸನ : ಹೆಸರೇ ಸೂಚಿಸುವಂತೆ ಚಕ್ರದ ರೀತಿಯಲ್ಲಿ ದೇಹವನ್ನ ಬಾಗಿಸುವ ಪ್ರಕ್ರಿಯೆ ಇದಾಗಿದೆ. ಮೊದಲು ಭೂಮಿಗೆ ಲಂಬವಾಗಿ ನಿಂತುಕೊಳ್ಳಿ. ಎರಡು ಕಾಲುಗಳ ನಡುವೆ ಕೊಂಚ ಅಂತರವಿರಲಿ. ಇದೀಗ ನಿಧಾನವಾಗಿ ಉಸಿರಾಡುತ್ತಾ ಹಿಂದಕ್ಕೆ ಬಾಗಿ ಕೈಗಳನ್ನ ನೆಲಕ್ಕೆ ಸ್ಪರ್ಶಿಸಿ. ಈ ರೀತಿ ಮಾಡೋದ್ರಿಂದ ನಿಮ್ಮ ದೇಹ ಬಿಲ್ಲಿನಂತೆ ಕಾಣಲಿದೆ.
ಮತ್ಸ್ಯಾಸನ : ಮೀನಿನ ಆಕಾರದಲ್ಲಿ ಈ ಆಸನ ಕಾಣೋದ್ರಿಂದ ಇದಕ್ಕೆ ಮತ್ಸ್ಯಾಸನ ಎಂಬ ಹೆಸರಿದೆ. ಬೆನ್ನಿನ ಮೇಲೆ ಮಲಗಿ. ಕೈಗಳನ್ನ ಕಾಲಿಗೆ ತಾಗಿಸಿ. ಪದ್ಮಾಸನ ಆಕೃತಿಯಲ್ಲಿ ಪಾದವನ್ನ ಇಟ್ಟುಕೊಳ್ಳಿ. ಕುತ್ತಿಗೆ ಸಮೇತ ಬೆನ್ನನ್ನ ನಿಧಾನವಾಗಿ ಮೇಲಕ್ಕೆತ್ತಿ. ನಿಮ್ಮ ಕೈಗಳು ಸಮಾನಂತರದಲ್ಲಿರಲಿ.