ಪ್ಲಾಸ್ಟಿಕ್ ಆರೋಗ್ಯಕ್ಕೆ ಮಾರಕ ಅನ್ನೋದು ಗೊತ್ತೇ ಇದೆ. ಆದರೂ ಎಷ್ಟೋ ತಾಯಂದಿರು ತಮ್ಮ ಮಗುವಿಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಲು ಕುಡಿಸ್ತಾರೆ.
ಆಘಾತಕಾರಿ ವಿಚಾರ ಅಂದ್ರೆ ವಿವಿಧ ರಾಜ್ಯಗಳಲ್ಲಿ ಮಾರಾಟವಾಗುವ ಮಕ್ಕಳ ಹಾಲಿನ ಬಾಟಲಿಗಳು ಮತ್ತು ಸಿಪ್ಪರ್‌ಗಳು ಅಪಾಯಕಾರಿ ರಾಸಾಯನಿಕವನ್ನು ಹೊಂದಿರುತ್ತವೆ. ಇದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಚಿಕ್ಕ ಮಕ್ಕಳ ಹಾಲಿನ ಬಾಟಲಿ ಮತ್ತು ಸಿಪ್ಪರ್ ನಲ್ಲಿ ರಾಸಾಯನಿಕದ ಪ್ರಮಾಣ ಪತ್ತೆಯಾಗುತ್ತಿದ್ದು, ಇದು ಮಾರಣಾಂತಿಕವಾಗಿದೆ ಅನ್ನೋದು ಹಲವು ಅಧ್ಯಯನಗಳಲ್ಲಿ ದೃಢಪಟ್ಟಿದೆ. ಹಾಲಿನ ಬಾಟಲಿಯಲ್ಲಿ ‘ಬಿಸ್ಫಿನಾಲ್-ಎ’ ಎಂಬ ರಾಸಾಯನಿಕವಿದ್ದು, ಇದರಿಂದ ಮಕ್ಕಳು ಅನೇಕ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.
ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಮಾದರಿಗಳನ್ನು ದೆಹಲಿ ಮೂಲದ ಟಾಕ್ಸಿಕ್ ಲಿಂಕ್ ಸಂಸ್ಥೆ ಪರೀಕ್ಷೆಗೆ ಒಳಪಡಿಸಿದೆ. ದೇಶದಲ್ಲಿ ಮಾರಾಟವಾಗ್ತಿರೋ ಹಾಲಿನ ಬಾಟಲಿಗಳು ಸುರಕ್ಷಿತವಲ್ಲ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಮಾನದಂಡವನ್ನು ಉತ್ಪಾದಕರು ಉಲ್ಲಂಘಿಸಿರುವುದು ಧೃಡಪಟ್ಟಿದೆ.
ಅಗ್ಗದ ಮತ್ತು ಗುಣಮಟ್ಟವಿಲ್ಲದ ಕಂಪನಿಯ ಬಾಟಲಿಗಳು ಸಹ ರಾಸಾಯನಿಕಗಳ ಲೇಪನದಿಂದ ಮೃದುವಾಗಿರುತ್ತವೆ. ಅಲ್ಲದೆ ಬಾಟಲಿಯು ದೀರ್ಘ ಕಾಲದವರೆಗೂ ಹಾಳಾಗುವುದಿಲ್ಲ. ಬಿಸಿ ಹಾಲು ಅಥವಾ ನೀರನ್ನು ಬಾಟಲಿಗೆ ಸುರಿದು ಮಗುವಿಗೆ ಕುಡಿಸಿದಾಗ ಈ ರಾಸಾಯನಿಕವೂ ಕರಗಿ ಮಗುವಿನ ದೇಹಕ್ಕೆ ಹೋಗುತ್ತದೆ. ಈ ರಾಸಾಯನಿಕವು ಹೊಟ್ಟೆ ಮತ್ತು ಕರುಳಿನ ನಡುವಿನ ಮಾರ್ಗವನ್ನು ಮುಚ್ಚುತ್ತದೆ.
ಇದರಿಂದ ಕೆಲವೊಮ್ಮೆ ಮಗುವಿನ ಜೀವಕ್ಕೇ ಅಪಾಯ ಬರಬಹುದು. ಹೃದಯ, ಮೂತ್ರಪಿಂಡ, ಯಕೃತ್ತು ಮತ್ತು ಶ್ವಾಸಕೋಶದ ಕಾಯಿಲೆಗಳು ಬರಬಹುದು. ಇಂತಹ ಬಾಟಲಿಗಳಲ್ಲಿ ಮಕ್ಕಳಿಗೆ ಫೀಡ್ ಮಾಡುವುದರಿಂದ ಮಕ್ಕಳಿಗೆ ಗಂಟಲು ಬಾತು ಹೋಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ವಾಂತಿ-ಬೇಧಿಯಾಗಬಹುದು. ಹಾಗಾಗಿ ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗುವ ಒಳ್ಳೆ ಗುಣಮಟ್ಟದ ಬಾಟಲಿಗಳನ್ನು ಬಳಸಿ.