ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡುವುದನ್ನು ಸುಪ್ರೀಂ ಕೋರ್ಟ್ನಲ್ಲಿ ವಿರೋಧಿಸಿದ ಸಿಬಿಐ ಮಗಳನ್ನೇ ಕೊಲ್ಲುವಂತಹ ಹೇಯ ಕೃತ್ಯ ಎಸಗಿದವರು ಮೃದು ಧೋರಣೆಗೆ ಅರ್ಹರಲ್ಲ ಎಂದು ವಾದಿಸಿದೆ.
ಇಂದ್ರಾಣಿ ಮುಖರ್ಜಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿರೋಧಿಸಿ ಅಫಿಡವಿಟ್ ಸಲ್ಲಿಸಿದ ಸಿಬಿಐ, ಇಂದ್ರಾಣಿ ತಮ್ಮ ಮಗಳನ್ನೇ ಕೊಂದಿದ್ದಾರೆ, ಅಲ್ಲದೇ ತಮ್ಮ ಮಗನನ್ನೂ ಸಹ ಕೊಲ್ಲಲೂ ಯತ್ನಿಸಿದ್ದಾರೆ ಎಂದು ಹೇಳಿದೆ.
ಇಂದ್ರಾಣಿ ಸಮಾಜದಲ್ಲಿ ಓರ್ವ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಲ್ಲಳು ಎಂದು ಸಿಬಿಐ ಹೇಳಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ ಜೈಲಿನಿಂದ ಹೊರಬಂದು ಅವರು ಸಾಕ್ಷ್ಯ ನಾಶಗೊಳಿಸುವ ಸಾಧ್ಯತೆಯಿದೆ. ಹೀಗಾಗಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕು ಎಂದು ಹೇಳಿದೆ.