ಮಕ್ಕಳಿಗೆ ಚಿಕ್ಕಿ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಲ್ಲೂ ಡ್ರೈ ಫ್ರೂಟ್ಸ್ ಸೇರಿಸಿ ಮಾಡಿದ ಚಿಕ್ಕಿ ಮತ್ತಷ್ಟು ರುಚಿಕರವಾಗಿರುತ್ತದೆ.
ಮಕ್ಕಳಿಗೆ ಸ್ನಾಕ್ಸ್ ರೂಪದಲ್ಲಿ ಇದನ್ನು ಕೊಟ್ಟರೆ ಅಂಗಡಿ ತಿಂಡಿಗಳನ್ನು ತಿನ್ನುವ ಗೋಜಿಗೆ ಹೋಗುವುದಿಲ್ಲ. ಮನೆಯಲ್ಲಿಯೇ ಇದನ್ನು ಮಾಡುವುದರಿಂದ ಆರೋಗ್ಯಕರವಾಗಿರುತ್ತದೆ ಜತೆಗೆ ರುಚಿಕರವಾಗಿರುತ್ತದೆ ಕೂಡ.
ಬೇಕಾಗುವ ಸಾಮಾಗ್ರಿಗಳು:
ಅರ್ಧ ಕಪ್-ಬಾದಾಮಿ, ಅರ್ಧ ಕಪ್ ಪಿಸ್ತಾ, ಅರ್ಧ ಕಪ್-ಗೋಡಂಬಿ, 1 ½ ಕಪ್ ಬೆಲ್ಲ, ½ ಕಪ್ ನೀರು, ಚಿಟಿಕೆ ಏಲಕ್ಕಿ ಪುಡಿ, 1ಟೀ ಸ್ಪೂನ್ ತುಪ್ಪ.
ಮಾಡುವ ವಿಧಾನ :
ಮೊದಲಿಗೆ ಒಂದು ಬಾಣಲೆಗೆ ಗೋಡಂಬಿ, ಬಾದಾಮಿ, ಪಿಸ್ತಾ ಇವಿಷ್ಟನ್ನು ಹಾಕಿ 10 ನಿಮಿಷ ನಿಧಾನ ಉರಿಯಲ್ಲಿ ಹುರಿದುಕೊಳ್ಳಿ.
ನಂತರ ಇನ್ನೊಂದು ಪಾತ್ರೆಗೆ ಬೆಲ್ಲ, ತುಪ್ಪ, ನೀರು ಹಾಕಿ ಪಾಕ ತಯಾರಿಸಿಕೊಳ್ಳಿ. ಇದಕ್ಕೆ ಕತ್ತರಿಸಿಟ್ಟುಕೊಂಡ ಬಾದಾಮಿ, ಗೋಡಂಬಿ, ಪಿಸ್ತಾವನ್ನು ಹಾಕಿ.
ಆಮೇಲೆ ಏಲಕ್ಕಿ ಪುಡಿಯನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ತಟ್ಟೆಗೆ ತುಪ್ಪ ಸವರಿ. ಈ ಮಿಶ್ರಣವನ್ನು ತಟ್ಟೆಗೆ ಹಾಕಿ. ತುಸು ಬಿಸಿ ಇರುವಾಗಲೇ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಕೊಳ್ಳಿ.