alex Certify ಮಕ್ಕಳಿದ್ದೂ ಅನಾಥವಾಯ್ತು ವೃದ್ಧ ತಂದೆಯ ಜೀವನ: ಬಸ್ ನಿಲ್ದಾಣವೇ ಈತನ ಅರಮನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿದ್ದೂ ಅನಾಥವಾಯ್ತು ವೃದ್ಧ ತಂದೆಯ ಜೀವನ: ಬಸ್ ನಿಲ್ದಾಣವೇ ಈತನ ಅರಮನೆ….!

ಚೆನ್ನೈ: ದುರಾದೃಷ್ಟದ ಘಟನೆಯೊಂದರಲ್ಲಿ 61ರ ವೃದ್ಧರೊಬ್ಬರು ಸಾಲಬಾಧೆಯಿಂದ ಮನೆ ಮಾರಿದ್ದು, ಇದೀಗ ತಂಗಲು ಸೂರಿಲ್ಲದೆ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ದುರಂತ ಎದುರಾಗಿದೆ.

61 ವರ್ಷದ ಮಾದಸಾಮಿ ಅವರು ಈಗ ತಮಿಳುನಾಡಿನ ತೆಂಕಶಿ ಜಿಲ್ಲೆಯ ಅಲಂಕುಲಂ ತಾಲೂಕಿನ ಅನೈಯಪ್ಪಪುರಂ ಗ್ರಾಮದಲ್ಲಿ ಬಸ್ ಶೆಲ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಮಾದಸಾಮಿ ಅವರ ಪತ್ನಿ ಐದು ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಪುತ್ರಿಯರಿಗೆ ವಿವಾಹ ನೆರವೇರಿಸಿದ್ದಾರೆ. ಅವರಿಬ್ಬರು ರಾಜ್ಯದ ವಿವಿಧ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಹೆಣ್ಣು ಮಕ್ಕಳಿಬ್ಬರೂ ತಮ್ಮ ತಂದೆಗೆ ನೆರವಿನ ಹಸ್ತ ಚಾಚಲು ಮುಂದೆ ಬಂದಿಲ್ಲ.

ತೊಡಲು ಬಟ್ಟೆ, ಟಿಫಿನ್ ಬಾಕ್ಸ್ ಮತ್ತು ನೀರಿನ ಬಾಟಲಿಗಳನ್ನು ಹೊರತುಪಡಿಸಿ ತನ್ನ ಬಳಿ ಯಾವುದೇ ವಸ್ತುಗಳು ಇಲ್ಲ ಎಂದು ಮಾದಸಾಮಿ ತನ್ನ ನೋವು ತೋಡಿಕೊಂಡಿದ್ದಾರೆ. ಹಗಲಿನಲ್ಲಿ ಫಾರ್ಮ್‌ಹ್ಯಾಂಡ್ ಆಗಿ ಅವರು ಕೆಲಸ ಮಾಡುತ್ತಾರಂತೆ. ಕೆಲಸ ಇಲ್ಲದಿರುವ ದಿನಗಳಲ್ಲಿ ಅವರು ಆಹಾರಕ್ಕಾಗಿ ಬೇಡುತ್ತಾರೆ. ಆದರೆ, ಯಾರೂ ಕೂಡ ಸಹಾಯ ಮಾಡಲು ಮುಂದೆ ಬರುವುದಿಲ್ಲ. ತನ್ನ ಜೀವನ ಅತ್ಯಂತ ಕೆಟ್ಟದಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮಾದಸಾಮಿ ಅವರೇನು ಕಡುಬಡುವರಾಗಿರಲಿಲ್ಲ. ಆರ್ಥಿಕವಾಗಿ ಚೆನ್ನಾಗಿಯೇ ಇದ್ದ ಅವರು, ತಮ್ಮ ಗ್ರಾಮದ ಜನಪ್ರಿಯ ಜಾನಪದ ಗಾಯಕರಾಗಿದ್ದರು. ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಯಾವಾಗಲೂ ಹೆಚ್ಚು ಬೇಡಿಕೆಯ ವ್ಯಕ್ತಿಯಾಗಿದ್ದರು.

ಆದರೆ, ಇವರ ಜೀವನವು ಯಾರೂ ಊಹಿಸಿರದ ರೀತಿಯಲ್ಲಿ ತಿರುವು ಪಡೆದುಕೊಂಡಿದ್ದು ನಿಜಕ್ಕೂ ದುರಂತವೇ ಸರಿ. ಸಂತೋಷದಿಂದ ಬದುಕುತ್ತಿದ್ದ ಅವರು ತನ್ನ ಹೆಂಡತಿಯ ಮರಣದ ನಂತರ, ದೈಹಿಕವಾಗಿ, ಮಾನಸಿಕವಾಗಿ ದುರ್ಬಲವಾದರು. ಸಾಲಗಳು ಹೆಚ್ಚಾಗಿ, ಕೊನೆಗೆ ಸಾಲ ತೀರಿಸಲು ಮನೆ ಮಾರಾಟ ಮಾಡಬೇಕಾಯಿತು.

ಮಾದಸಾಮಿ ಮಾನ್ಯವಾದ ವಸತಿ ವಿಳಾಸ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿಲ್ಲದ ಕಾರಣ, ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಅವರು ವೃದ್ಧಾಪ್ಯ ಪಿಂಚಣಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇದೀಗ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದು, ನೆರವಿನ ನಿರೀಕ್ಷೆಯಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...