ಯುದ್ಧ ಪೀಡಿತ ಉಕ್ರೇನ್ನ ನಗರಗಳಲ್ಲಿ ಹಾಗೂ ಗಡಿ ಭಾಗಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಭಾರತವು ಇನ್ನಷ್ಟು ಚುರುಕು ಮುಟ್ಟಿಸಿದೆ. ಇಂದು ಮಧ್ಯಾಹ್ನದ ಒಳಗಾಗಿ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ತರಲು ಕನಿಷ್ಟ ಮೂರು ವಿಮಾನಗಳು ಸಿದ್ಧವಾಗಿರಲಿವೆ.
ರೋಮೆನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಎರಡು ವಿಮಾನಗಳು ಹಾಗೂ ಹಂಗೇರಿಯ ರಾಜಧಾನಿ ಬುಡಾಪೆಸ್ಟ್ನಿಂದ ಒಂದು ವಿಮಾನವು ಹೊರಡಲಿದೆ. ಈ ವಿಮಾನಗಳು ಮುಂಬೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳಿಗೆ ಬಂದಿಳಿಯಲಿವೆ.
ಇಂದು ಬೆಳಗ್ಗೆಯಷ್ಟೇ ಉಕ್ರೇನ್‌ನಿಂದ 9ನೇ ವಿಮಾನವು ಭಾರತದತ್ತ ಮುಖ ಮಾಡಿದೆ. ಈ ವಿಚಾರವನ್ನು ಘೋಷಣೆ ಮಾಡಲು ಟ್ವೀಟ್ ಮಾಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್, ನಮ್ಮ ಭಾರತೀಯರು ಸುರಕ್ಷಿತವಾಗುವ ತನಕ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದಿದ್ದಾರೆ.
ಉಕ್ರೇನ್‌ನಿಂದ ಭಾರತೀಯರನ್ನು ತಾಯ್ನಾಡಿಗೆ ಮರಳಿ ತರುವ ಕಾರ್ಯಕ್ಕೆ ಆಪರೇಷನ್ ಗಂಗಾ ಎಂದು ಹೆಸರಿಡಲಾಗಿದ್ದು ಈ ಸಂಬಂಧ ಕೇಂದ್ರ ಸಚಿವ ಡಾ. ಎಸ್ ಜೈಶಂಕರ್ ನಿರಂತರವಾಗಿ ಪೋಸ್ಟ್ ಮಾಡುತ್ತಲೇ ಇದ್ದಾರೆ.
ಉಕ್ರೇನ್‌ನಿಂದ ಸ್ಥಳಾಂತರಿಸಲಾದ 182 ಭಾರತೀಯ ಪ್ರಜೆಗಳನ್ನು ಹೊತ್ತ ಏಳನೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಇಂದು ಬೆಳಗ್ಗೆ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಮುಂಬೈಗೆ ಬಂದಿಳಿದಿದೆ ಎಂದು ಏರ್‌ಲೈನ್ ವಕ್ತಾರರು ಅಧಿಕೃತ ಮಾಹಿತಿ ನೀಡಿದ್ದಾರೆ.