ಸಮೀಪದ ಫೈರಿಂಗ್ ರೇಂಜ್ನಿಂದ ಬಂದ ಗುಂಡೊಂದು ತಲೆಗೆ ತಗುಲಿದ ಪರಿಣಾಮ 11 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆಯು ತಮಿಳುನಾಡಿನ ಪುದುಕೋಟ್ಟೈ ಎಂಬಲ್ಲಿ ನಡೆದಿದೆ.ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಶೂಟಿಂಗ್ ರೇಂಜ್ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ ತರಬೇತಿಯಲ್ಲಿ ನಿರತರಾಗಿದ್ದ ವೇಳೆಯಲ್ಲಿ ತರಬೇತುದಾರನ ಬಂದೂಕಿನಿಂದ ಮಿಸ್ ಆಗಿ ಬಂದ ಗುಂಡೊಂದು ಬಾಲಕನ ತಲೆಗೆ ತಾಕಿದೆ ಎಂದು ವರದಿಯಾಗಿದೆ. ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಪುದುಕೋಟೈ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಲಾಯಿತಾದರೂ ಬಳಿಕ ವೈದ್ಯರ ಸಲಹೆ ಮೇರೆಗೆ ತಂಜಾವೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಬಾಲಕನನ್ನು ಕೆ. ಪುಘಝೇಂದಿ ಎಂದು ಗುರುತಿಸಲಾಗಿದೆ. ತರಬೇತಿ ನಡೆಯುತ್ತಿದ್ದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಬಾಲಕನ ಅಜ್ಜನ ಮನೆ ಇದೆ ಎನ್ನಲಾಗಿದೆ. ಈತ ತರಬೇತಿ ಕೇಂದ್ರದ ಸಮೀಪದಲ್ಲೇ ಆಟವಾಡುತ್ತಿದ್ದ ವೇಳೆ ಗುಂಡು ತಗುಲುತ್ತಿದ್ದಂತೆಯೇ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ತರಬೇತಿ ಕೇಂದ್ರವನ್ನು ಬಂದ್ ಮಾಡಿಸಲಾಗಿದೆ. ಗಾಯಗೊಂಡಿರುವ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರು ಮುಂದಾಗಿದ್ದಾರೆ.