ವಜ್ರದ ವ್ಯಾಪಾರಿ ನೀರವ್ ಮೋದಿ, ಮೆಹುಲ್ ಚೋಕ್ಸಿ ಹಾಗೂ ಮದ್ಯದ ದೊರೆ ವಿಜಯ್ ಮಲ್ಯ ಅವರ ಆಸ್ತಿ ಮಾರಾಟದಿಂದ ದೇಶದ ಬ್ಯಾಂಕ್ಗಳು ಸುಮಾರು 13,109 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಸೂಲಿ ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಅಡಿಯಲ್ಲಿ ಕೇಂದ್ರ ಏಜೆನ್ಸಿಯು ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಬ್ರಿಟನ್ನ ನ್ಯಾಯಾಲಯವು ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಭಾರತೀಯ ಬ್ಯಾಂಕ್ಗಳ ಒಕ್ಕೂಟವು ಪ್ರಸ್ತುತ ನಿಷ್ಕ್ರಿಯಗೊಂಡಿರುವ ಕಿಂಗ್ಫಿಶರ್ ಏರ್ಲೈನ್ಸ್ನಿಂದ ನೀಡಬೇಕಾದ ಸಾಲವನ್ನು ಮರುಪಾವತಿ ಮಾಡಲು ವಿಶ್ವಾದ್ಯಂತ ಫ್ರೀಜಿಂಗ್ ಆದೇಶವನ್ನು ಅನುಸರಿಸಲು ದಾರಿ ಮಾಡಿಕೊಟ್ಟಂತಾಗಿದೆ.
ಪ್ರಸ್ತುತ 65 ವರ್ಷದ ವಿಜಯ್ ಮಲ್ಯ ಬ್ರಿಟನ್ನಲ್ಲಿ ಜಾಮೀನಿನ ಮೇಲೆ ಉಳಿದಿದ್ದಾರೆ. ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆಯಲ್ಲಿ ಕೆಲ ಗೌಪ್ಯ ಕಾನೂನು ವಿಚಾರಗಳು ಪ್ರಕ್ರಿಯೆಯಲ್ಲಿದ್ದು ಅದು ಮುಗಿಯುತ್ತಿದ್ದಂತೆಯೇ ಮಲ್ಯ ಭಾರತಕ್ಕೆ ಬರುವುದು ಅನಿವಾರ್ಯವಾಗಲಿದೆ.
ವಿಜಯ್ ಮಲ್ಯ ಬ್ಯಾಂಕ್ಗಳ ಒಕ್ಕೂಟಕ್ಕೆ ಅಸಲು ಹಾಗೂ ಬಡ್ಡಿ ಸೇರಿ 9000 ಕೋಟಿಗೂ ಅಧಿಕ ಮೊತ್ತ ವಂಚಿಸಿದ್ದಾರೆ. ಇತ್ತ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾದ ವಜ್ರದ ವ್ಯಾಪಾರಿ ನೀರವ್ ಮೋದಿ ಹಾಗೂ ಚೋಕ್ಸಿ ಬ್ಯಾಂಕ್ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿದ್ದಾರೆ.