ಯುವಕರಿಗೆ ಕಾರು, ಬೈಕ್ ಕ್ರೇಜ್ ತುಸು ಹೆಚ್ಚೇ ಇರುತ್ತದೆ. ಕೆಲವರು ತುಂಬಾ ವೇಗವಾಗಿ ಬೈಕ್ ರೈಡ್ ಮಾಡುತ್ತಾ ಹಿಂಬದಿ ಸವಾರನನ್ನು ಕೆಳಗೆ ಬೀಳಿಸಿರುವ ಅನೇಕ ನಿದರ್ಶನಗಳಿವೆ. ಆದರೆ, ಎಂದಾದ್ರೂ ಕಾರಿನಿಂದ ಕೆಳಗೆ ಬಿದ್ದಿರುವ ಸವಾರರನ್ನು ನೋಡಿದ್ದೀರಾ..? ಹಾಗಿದ್ದರೆ ಈ ಸ್ಟೋರಿ ಓದಿ.
ಹೌದು, ಇಲ್ಲೊಂದೆಡೆ ಯುವಕರು ಕನ್ವರ್ಟಿಬಲ್ ಬಿಎಂಡಬ್ಲ್ಯೂನಲ್ಲಿ ಜಾಲಿ ಮಾಡಲು ಹೋಗಿ ಎಡವಟ್ಟಾದಂತಹ ಘಟನೆ ನಡೆದಿದೆ. ಯುಕೆಯಲ್ಲಿ ನಡೆದ ಕಾರ್ ಮೀಟ್‌ಅಪ್‌ನಲ್ಲಿ ಸ್ನೇಹಿತರು ಜಾಲಿಯಾಗಿ ಕನ್ವರ್ಟಿಬಲ್ ಬಿಎಂಡಬ್ಲ್ಯೂ ಕಾರಿನಲ್ಲಿ ಸವಾರಿ ಮಾಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಬಿಎಂಡಬ್ಲ್ಯು ಕನ್ವರ್ಟಿಬಲ್ ಕಾರಿನಿಂದ ಕೆಳಗೆ ಬಿದ್ದಿರುವ ಉಲ್ಲಾಸದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಯುಕೆಯ ವಾರ್ವಿಕ್‌ನಲ್ಲಿರುವ ಬ್ರಿಟಿಷ್ ಮೋಟಾರ್ ಮ್ಯೂಸಿಯಂನಲ್ಲಿ ಭಾನುವಾರ ನಡೆದ ಅಲ್ಟಿಮೇಟ್ ಬಿಎಂಡಬ್ಲ್ಯೂ ಕಾರ್ ಮೀಟ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ ನಾಲ್ಕರು ಸ್ನೇಹಿತರ ಗುಂಪೊಂದು ಬಿಎಂಡಬ್ಲ್ಯೂ ಎಂ4 ನಲ್ಲಿ ಹೊರಡುವುದನ್ನು ನೋಡಬಹುದು. ಕಪ್ಪು ಬಣ್ಣದ ಉಡುಪನ್ನು ಧರಿಸಿದ ವ್ಯಕ್ತಿಯೊಬ್ಬ ಡ್ರಾಪ್-ಟಾಪ್ ಬಿಎಂಡಬ್ಲ್ಯೂನ ಹಿಂಭಾಗದಲ್ಲಿ ಇನ್ನೊಬ್ಬ ಸ್ನೇಹಿತನೊಂದಿಗೆ ಕುಳಿತಿದ್ದಾನೆ. ಆತನ ಸ್ನೇಹಿತನಾಗಿರುವ ಕಾರಿನ ಚಾಲಕ ನಿಧಾನವಾಗಿ ಕಾರನ್ನು ಓಡಿಸುತ್ತಾ ಒಮ್ಮೆಲೆ ವೇಗ ಹೆಚ್ಚಿಸಿದ್ದಾನೆ. ಈ ವೇಳೆ ಹಿಂಬದಿ ಕುಳಿತಿದ್ದ ಕಪ್ಪು ಬಣ್ಣದ ಉಡುಪು ಧರಿಸಿದ್ದಾತ ಗಾಳಿಯ ವೇಗಕ್ಕೆ ಹಿಂಭಾಗದ ಅಂಚಿನಿಂದ ಜಾರಿ ರಸ್ತೆಗೆ ಬಿದ್ದಿದ್ದಾನೆ.
ಕೂಡಲೇ ಇದನ್ನು ಗಮನಿಸಿದ ಆತನ ಸ್ನೇಹಿತರು ಕಾರು ನಿಲ್ಲಿಸಿದ್ದಾರೆ. ಆ ವ್ಯಕ್ತಿ ತನಗೇನೂ ಆಗೆ ಇಲ್ಲ ಎಂಬಂತೆ ಎದ್ದು ಕಾರಿನತ್ತ ತೆರಳುತ್ತಾನೆ. ಈ ವೇಳೆ ರಸ್ತೆಬದಿ ನಿಂತಿದ್ದವರೆಲ್ಲಾ ಈ ದೃಶ್ಯ ನೋಡಿ ನಗೆಬೀರಿದ್ದಾರೆ. ಈ ಕ್ಷಣವು ವ್ಯಕ್ತಿ ಮತ್ತು ಅವನ ಸ್ನೇಹಿತರು ಮುಜುಗರಕ್ಕೊಳಗಾಗಿದ್ದರ ನೆಟ್ಟಿಗರಿಗೆ ನಗೆ ತರಿಸಿದೆ.