ಚಪಾತಿ, ರೋಟಿ ಮಾಡಿದಾಗ ಆಲೂಗಡ್ಡೆ ಪಲ್ಯ, ಕ್ಯಾಬೇಜ್ ಪಲ್ಯ ಮಾಡುತ್ತೇವೆ. ಒಮ್ಮೆ ಈ ಬೇಬಿ ಕಾರ್ನ್ ಮಸಾಲ ಮಾಡಿಕೊಂಡು ಸವಿಯಿರಿ. ಇದರ ರುಚಿ ಸಖತ್ ಆಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಬೇಬಿ ಕಾರ್ನ್-5, ದೊಡ್ಡ ಈರುಳ್ಳಿ-1, ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಟೀ ಸ್ಪೂನ್, ಟೊಮೆಟೊ-2, ಗೋಡಂಬಿ-10, ಅರಿಸಿನ-1/4 ಟೀ ಸ್ಪೂನ್, ಖಾರದ ಪುಡಿ-3/4 ಟೀ ಸ್ಪೂನ್, ಕೊತ್ತಂಬರಿ ಪುಡಿ-1 ಟೀ ಸ್ಪೂನ್, ಗರಂ ಮಸಾಲ-1/2 ಟೀ ಸ್ಪೂನ್, ಕಸೂರಿ ಮೇಥಿ-1 ಟೀ ಸ್ಪೂನ್, ಏಲಕ್ಕಿ-1, ಲವಂಗ-1, ಚಕ್ಕೆ-ಚಿಕ್ಕ ತುಂಡು, ಪಲಾವ್ ಎಲೆ-1, ಜೀರಿಗೆ-1/2 ಟೀ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ನೀರು-ಅಗತ್ಯವಿರುವಷ್ಟು, ಎಣ್ಣೆ-2 ಟೇಬಲ್ ಸ್ಪೂನ್, ಬೆಣ್ಣೆ-2 ಟೀ ಸ್ಪೂನ್, ಕೊತ್ತಂಬರಿಸೊಪ್ಪು-ಸ್ವಲ್ಪ.
ಮಾಡುವ ವಿಧಾನ:
ಬೇಬಿಕಾರ್ನ್ ಅನ್ನು ಚೆನ್ನಾಗಿ ತೊಳೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಟೊಮೆಟೊ ಹಾಕಿ ನಯವಾಗಿ ರುಬ್ಬಿಕೊಂಡು ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ನಂತರ ಗೋಡಂಬಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ.
ಒಂದು ಕುಕ್ಕರ್ ಗೆ ಸ್ವಲ್ಪ ಎಣ್ಣೆ, ಬೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.ಇದಕ್ಕೆ ಲವಂಗ, ಏಲಕ್ಕಿ, ಚಕ್ಕೆ, ಪಲಾವ್ ಎಲೆ ಹಾಕಿ ಜೀರಿಗೆ ಸೇರಿಸಿ ನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಗರಂ ಮಸಾಲ, ಧನಿಯಾ ಪುಡಿ, ಅರಿಶಿನ, ಖಾರದಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಟೊಮೆಟೊ ಮಿಶ್ರಣ ಸೇರಿಸಿ ಸ್ವಲ್ಪ, ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಬೇಬಿಕಾರ್ನ್ ಪೀಸ್ ಹಾಗೂ ರುಬ್ಬಿದ ಗೋಡಂಬಿ ಮಿಶ್ರಣ, ಸ್ವಲ್ಪ ನೀರು ಸೇರಿಸಿ ಕುಕ್ಕರ್ ನಲ್ಲಿ 2 ವಿಷಲ್ ಕೂಗಿಸಿಕೊಳ್ಳಿ. ನಂತರ ಕುಕ್ಕರ್ ತೆಗೆದು ಕಸೂರಿ ಮೇಥಿ ಸೇರಿಸಿ ಸ್ವಲ್ಪ ಹೊತ್ತು ಕುದಿಸಿ. ಕೊತ್ತಂಬರಿಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ.