ಬೆಳಿಗ್ಗೆ ತಿಂಡಿ ಏನು ಮಾಡುವುದು ಎಂಬುದು ಹೆಂಗಳೆಯರಿಗೆ ಕಾಡುವ ದೊಡ್ಡ ತಲೆಬಿಸಿ. ದಿನ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವ ಮಕ್ಕಳು, ರೈಸ್ ಬಾತ್ ಬೇಡ ಎನ್ನುವವರು, ಒಟ್ಟಾರೆ ಬೆಳಿಗ್ಗಿನ ತಿಂಡಿಯೇ ತಲೆನೋವಾಗಿ ಕಾಡುತ್ತದೆ.
ಇಲ್ಲಿ ಸುಲಭವಾಗಿ ಮಾಡುವ ಈರುಳ್ಳಿ ಉತ್ತಪ್ಪಂ ಕುರಿತು ಮಾಹಿತಿ ಇದೆ. ತಿನ್ನುವುದಕ್ಕೂ ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು: 2 ಕಪ್ ಇಡ್ಲಿ ಅಕ್ಕಿ, ½ ಕಪ್ ಉದ್ದಿನ ಬೇಳೆ, 1/1 ಟೀ ಸ್ಪೂನ್ ಮೆಂತೆ ಕಾಳು, 1 ಕಪ್ ಅವಲಕ್ಕಿ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಸ್ವಲ್ಪ. ಅರ್ಧ ಕಪ್ ಕ್ಯಾರೆಟ್ ತುರಿ, 1 ಕಪ್ ಈರುಳ್ಳಿ ಚಿಕ್ಕದ್ದಾಗಿ ಕತ್ತರಿಸಿದ್ದು, 1 ಹಸಿಮೆಣಸು ಸಣ್ಣದ್ದಾಗಿ ಕತ್ತರಿಸಿದ್ದು, ಕೊತ್ತಂಬರಿ ಸೊಪ್ಪು ಅರ್ಧ ಕಪ್.
ಮೊದಲಿಗೆ ಅಕ್ಕಿ ಹಾಗೂ ಉದ್ದು, ಮೆಂತೆ ಕಾಳನ್ನು ಚೆನ್ನಾಗಿ ತೊಳೆದು 4 ಗಂಟೆ ಚೆನ್ನಾಗಿ ನೆನೆಸಿಡಿ. ನಂತರ ಇವಿಷ್ಟನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅವಲಕ್ಕಿಯನ್ನು ತೊಳೆದು ನೆನೆಸಿಟ್ಟುಕೊಂಡಿರಿ. ಇದನ್ನು ರುಬ್ಬಿಕೊಂಡು ಉದ್ದಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕೈಯಾಡಿಸಿ 8 ಗಂಟೆ ಹೊತ್ತು ಬಿಡಿ. ಬೆಳಿಗ್ಗೆ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಒಂದು ಬೌಲ್ ಗೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್ ತುರಿ, ಹಸಿಮೆಣಸು, ಕೊತ್ತಂಬರಿಸೊಪ್ಪು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಗ್ಯಾಸ್ ಮೇಲೆ ತವಾ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ದೋಸೆ ಹ್ಯುಯಿರಿ. ಅದರ ಮೇಲೆ ರೆಡಿ ಮಾಡಿಟ್ಟುಕೊಂಡ ಈರುಳ್ಳಿ, ಕ್ಯಾರೆಟ್ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಹಾಕಿ. ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ರುಚಿಕರವಾದ ಈರುಳ್ಳಿ ಉತ್ತಪ್ಪಂ ರೆಡಿ.