ಲೈಂಗಿಕ ಚಟುವಟಿಕೆಗಳಿಗೆ ತಮ್ಮ ಪತ್ನಿಯರನ್ನೇ ಬಳಕೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ ಪಟ್ಟಣದ ಪೊಲೀಸರು ಬಳಿಕ ಇತರೆ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಫೇಸ್ಬುಕ್ ಹಾಗೂ ಟೆಲಿಗ್ರಾಂನಂತಹ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಈ ದಂಧೆಯನ್ನು ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮಹಿಳೆಯೊಬ್ಬರು ತಮ್ಮ ಪತಿ ವಿರುದ್ಧ ದೂರನ್ನು ನೀಡಿದ್ದರು. ಇಂತಹ ದಂಧೆಯನ್ನು ನಡೆಸುವ ಸಲುವಾಗಿ ನನ್ನ ಪತಿ ನನ್ನನ್ನು ತಮ್ಮ ಆನ್ಲೈನ್ ಸ್ನೇಹಿತರಿಗೆ ಪರಿಚಯಿಸಿದ್ದರು ಎಂದು ಆರೋಪಿಸಿದ್ದಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ಆಕೆಯ ಪತಿಯನ್ನು ಬಂಧಿಸಿದರು. ಇದಾದ ಬಳಿಕ ಈ ಲೈಂಗಿಕ ಚಟುವಟಿಕೆಯ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಸೋಶಿಯಲ್ ಮೀಡಿಯಾ ಗ್ರೂಪ್ಗಳಲ್ಲಿ ಸದಸ್ಯರು ತಮ್ಮ ಪತ್ನಿ ವಿನಿಮಯ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಕೆಲವು ಗ್ರೂಪ್ಗಳಲ್ಲಿ 5000ಕ್ಕೂ ಅಧಿಕ ಸದಸ್ಯರಿದ್ದಾರೆ ಎನ್ನಲಾಗಿದೆ.
ವಕೀಲರು, ವೈದ್ಯರಂತಹ ಉನ್ನತ ಹುದ್ದೆಗಳಲ್ಲಿ ಇರುವವರೂ ಸಹ ನಕಲಿ ಗುರುತಿನ ಮೂಲಕ ಈ ಗ್ರೂಪ್ನಲ್ಲಿ ಸದಸ್ಯರಾಗಿದ್ದರು. ಕೆಲ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಈ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಆದರೆ ಬಹುತೇಕ ಮಹಿಳೆಯರು ಪತಿಯ ಒತ್ತಾಯದಿಂದ ಈ ದಂಧೆಗೆ ಇಳಿದಿದ್ದರು ಎನ್ನಲಾಗಿದೆ.