35 ವರ್ಷದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಸಾಹಸ ಪ್ರದರ್ಶಿಸಲು ಹೋಗಿ ಜೀವವನ್ನೇ ಕಳೆದುಕೊಂಡ ಘಟನೆಯು ಭೂಪಾಲ್ನಲ್ಲಿ ನಡೆದಿದೆ. ಮೊಬೈಲ್ನಲ್ಲಿ ನೋಡಿದ್ದ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡಲು ಹೋದ ವ್ಯಕ್ತಿಯೊಬ್ಬ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು 35 ವರ್ಷದ ಗೋವಿಂದ್ ಸಿಂಗ್ ಮೆಹ್ರಾ ಎಂದು ಗುರುತಿಸಲಾಗಿದೆ. ಮಾರ್ಚ್ 6ರಂದು ಮದ್ಯದ ಅಮಲಿನಲ್ಲಿದ್ದ ಗೋವಿಂದ್ ಸಿಂಗ್ ಮೊಬೈಲ್ನಲ್ಲಿ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಎನ್ನಲಾಗಿದೆ.
ವಿಡಿಯೋವನ್ನು ವೀಕ್ಷಿಸುತ್ತಿದ್ದ ವೇಳೆಯಲ್ಲಿ ಓರ್ವ ವ್ಯಕ್ತಿ ಬೆಂಕಿಯನ್ನು ಉಗುಳುತ್ತಿರೋದನ್ನು ಗೋವಿಂದ್ ಸಿಂಗ್ ನೋಡಿದ್ದಾನೆ. ಆದರೆ ಅಮಲಿನಲ್ಲಿದ್ದ ಗೋವಿಂದ್ ಇದೇ ರೀತಿಯ ಸಾಹಸ ಮಾಡಲು ನಿರ್ಧರಿಸಿದ್ದಾನೆ. ಪೆಟ್ರೋಲ್ ತಂದು ಅದನ್ನು ಬಾಯಿಯಲ್ಲಿ ಹಾಕಿಕೊಂಡು ಬೆಂಕಿಯ ಮುಂದೆ ಪೆಟ್ರೋಲ್ ಉಗುಳಲು ಯತ್ನಿಸಿದನು.
ಆದರೆ ಪೆಟ್ರೋಲ್ ಗೋವಿಂದ್ ದೇಹದ ಮೇಲೆ ಚೆಲ್ಲಿತ್ತು. ಹೀಗಾಗಿ ಕೂಡಲೇ ಗೋವಿಂದ್ ಬೆಂಕಿಯ ದಾಳಿಗೆ ತುತ್ತಾದನು. ಬೆಂಕಿಯಿಂದ ಪಾರಾಗಬೇಕೆಂದು ಗೋವಿಂದ್ ಹತ್ತಿರದಲ್ಲೇ ಇದ್ದ ನಾಲೆಗೆ ಹಾರಿದ್ದಾನೆ. ಆದರೆ ಮೈ ತುಂಬಾ ಸುಟ್ಟ ಗಾಯಗಳಾಗಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.