ಬಿಸಿ ಅನ್ನದ ಜತೆ ರುಚಿಕರವಾದ ಅವರೆಕಾಯಿ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ಅವರೆಕಾಯಿ ಸಾಂಬಾರಿನ ವಿಧಾನವಿದೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1ಕಪ್ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ಗೆ ಹಾಕಿ ಬೇಳೆ ಬೇಯುವಷ್ಟು ನೀರು, ಚಿಟಿಕೆ ಅರಿಶಿನ ½ ಟೀ ಸ್ಪೂನ್ ಎಣ್ಣೆ ಹಾಕಿ 1 ವಿಷಲ್ ಕೂಗಿಸಿಕೊಳ್ಳಿ. ¼ ಕೆಜಿಯಾಗುವಷ್ಟು ಅವರೆಕಾಯಿಯನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಹಾಗೇ ¼ ಕಪ್ ನಷ್ಟು ಹುಣಸೆಹಣ್ಣಿನ ರಸ, ಸಾಂಬಾರು ಪುಡಿ 1 ಚಮಚ, ಖಾರದ ಪುಡಿ – 1 ಟೀ ಸ್ಪೂನ್ , 1 ಈರುಳ್ಳಿ (ಕತ್ತರಿಸಿಕೊಂಡಿದ್ದು), ಟೊಮೆಟೊ – 1 (ಕತ್ತರಿಸಿಕೊಂಡಿದ್ದು) 10 – ಎಸಳು-ಕರಿಬೇವು, 2 ಚಮಚ – ಎಣ್ಣೆ, 1 ಟೀ ಸ್ಪೂನ್ – ಸಾಸಿವೆ, 1 -ಟೀ ಸ್ಪೂನ್ – ಜೀರಿಗೆ, ಕೊತ್ತಂಬರಿಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ – 5 ಎಸಳು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಲೇ ಸಾಸಿವೆ, ಜೀರಿಗೆ, ಹಾಕಿ ಅದು ಸಿಡಿಯುತ್ತಲೆ ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ, ಟೊಮೆಟೊ ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಿ. ನಂತರ ಕತ್ತರಿಸಿಕೊಂಡ ಅವರೆಕಾಯಿ ಹಾಕಿ, ಸ್ವಲ್ಪ ಉಪ್ಪು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಇದಕ್ಕೆ 2 ಕಪ್ ನೀರು, ಸಾಂಬಾರು ಪುಡಿ, ಖಾರದಪುಡಿ ಹಾಕಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ನಂತರ ಬೇಯಿಸಿಕೊಂಡ ಬೇಳೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಕುದಿಸಿಕೊಂಡು ಕೊತ್ತಂಬರಿಸೊಪ್ಪು ಸೇರಿಸಿದರೆ ರುಚಿಕರವಾದ ಸಾಂಬಾರು ಸವಿಯಲು ಸಿದ್ಧ.