ಬಿಸಿಲಿನ ಬೇಗೆಗೆ ಬಾಯಾರಿಕೆ ಸಹಜ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪಾನೀಯಗಳು ತಕ್ಷಣಕ್ಕೆ ಬಾಯಾರಿಕೆ ಇಂಗಿಸಿದಂತೆ ಕಂಡುಬಂದರೂ ಅದರಿಂದ ದೇಹದ ಮೇಲಾಗುವ ಪರಿಣಾಮ ಆತಂಕ ತರುತ್ತದೆ.
ಹಾಗಾಗಿ ಮನೆಯಲ್ಲಿಯೇ ರುಚಿಯಾದ ಹಾಗೂ ಆರೋಗ್ಯಕ್ಕೆ ಹಿತವಾದ ಪಾನೀಯವನ್ನು ತಯಾರಿಸಿ ದಾಹ ತೀರಿಸಿಕೊಳ್ಳಬಹುದಾಗಿದೆ.
ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚು ನೀರಿನ ಅಂಶ ಅಗತ್ಯವಿರುವುದರಿಂದ ನೀರಿನ ಅಂಶವಿರುವ ಹಣ್ಣು ಹಾಗೂ ತರಕಾರಿಯ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು.
ಅದರೊಂದಿಗೆ ಬೇಸಿಗೆಯ ದಾಹ ತೀರಿಸಲು ಮತ್ತು ದೇಹವನ್ನು ತಂಪಾಗಿರಿಸಿಕೊಳ್ಳಲು ಎಳ್ಳಿನ ತಂಪು ಅತ್ಯಂತ ಸಹಕಾರಿಯಾಗಿದೆ.
ಬೇಕಾಗುವ ಸಾಮಗ್ರಿ:
ಬಿಳಿ ಎಳ್ಳು, ಹಾಲು, ಉಪ್ಪು, ಬೆಲ್ಲ ಅಥವಾ ಸಕ್ಕರೆ
ಮಾಡುವ ವಿಧಾನ:
ಎರಡು ಕಪ್ ಬಿಳಿ ಎಳ್ಳನ್ನು ತೆಗೆದುಕೊಂಡು ನೀರಿನಲ್ಲಿ ಒಂದು ಗಂಟೆ ಕಾಲ ನೆನೆಹಾಕಿ. ನೆನೆಹಾಕಿದ ಎಳ್ಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ನೀರು, ಸ್ವಲ್ಪ ಹಾಲು, ಚಿಟಿಕೆ ಉಪ್ಪು ಹಾಗೂ ಬೆಲ್ಲ ಅಥವಾ ಸಕ್ಕರೆ ಹಾಕಿ ಬೆರೆಸಿ. ಬೇಕಾದರೆ ಒಂದೆರಡು ಐಸ್ ಪೀಸ್ ಗಳನ್ನೂ ಹಾಕಿ ಕುಡಿಯಬಹುದು. ಎಳ್ಳು ದೇಹದ ಉಷ್ಣವನ್ನು ಕಡಿಮೆ ಮಾಡುವುದರಿಂದ ಬಿಸಿಲಿನ ಬೇಗೆಯಿಂದಾಗುವ ಹೊಟ್ಟೆ ಉರಿಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಬಣ್ಣದ ಪಾನೀಯಕ್ಕೆ ಮರುಳಾಗದೇ ಆರೋಗ್ಯಕರ ಪೇಯಕ್ಕೆ ಹೆಚ್ಚಿನ ಆದ್ಯತೆ ನೀಡಿ.