ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ. ಏನನ್ನು ಧರಿಸಬೇಕು ಎಂಬುದನ್ನು ನಿರ್ಧರಿಸಿವುದು ಮಹಿಳೆಯರ ಹಕ್ಕಾಗಿದೆ ಎಂದು ಪ್ರಿಯಾಂಕ ಗುಡುಗಿದರು. ಬಿಕಿನಿ, ಸೀರೆ, ಜೀನ್ಸ್ ಅಥವಾ ಹಿಜಾಬ್ ಇವುಗಳಲ್ಲಿ ಯಾವುದನ್ನು ಬೇಕಿದ್ದರೂ ಮಹಿಳೆ ಧರಿಸಬಹುದು ಎಂದು ಪ್ರಿಯಾಂಕ ಹೇಳಿದ್ದಾರೆ.
ರಾಜ್ಯದಲ್ಲಿ ನಿನ್ನೆಯಷ್ಟೇ ಸಮವಸ್ತ್ರ ವಿವಾದ ವಿಚಾರ ತಾರಕಕ್ಕೇರಿತ್ತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂಸಾಚಾರಕ್ಕೂ ಈ ವಿವಾದವು ಪ್ರಚೋದನೆ ನೀಡಿತ್ತು. ಈ ಎಲ್ಲದರ ಬಗ್ಗೆ ಇಂದು ಕಮೆಂಟ್ ಮೂಲಕ ತನ್ನ ಅಭಿಪ್ರಾಯವನ್ನು ಹೊರಹಾಕಿರುವ ಪ್ರಿಯಾಂಕ ಬಿಕಿನಿ, ಸೀರೆ, ಜೀನ್ಸ್ ಅಥವಾ ಹಿಜಾಬ್, ಇವುಗಳಲ್ಲಿ ಯಾವುದನ್ನು ಧರಿಸಬೇಕು ಎಂಬುದನ್ನು ನಿರ್ಧರಿಸುವುದು ಪ್ರತಿಯೊಬ್ಬ ಮಹಿಳೆಗೆ ಇರುವ ಹಕ್ಕಾಗಿದೆ. ಈ ಹಕ್ಕನ್ನು ಭಾರತೀಯ ಸಂವಿಧಾನವೇ ಮಹಿಳೆಯರಿಗೆ ನೀಡಿದೆ. ಹೀಗಾಗಿ ಮಹಿಳೆಯರಿಗೆ ಕಿರುಕುಳ ನೀಡುವದನ್ನು ನಿಲ್ಲಿಸಿ ಎಂದು ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ.
ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಸಮವಸ್ತ್ರ ವಿವಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಿವಸೇನಾ ರಾಜ್ಯಸಭಾ ಡೆಪ್ಯೂಟಿ ಲೀಡರ್ ಪ್ರಿಯಾಂಕಾ ಚತುರ್ವೇದಿ, ಯುವ ವಿದ್ಯಾರ್ಥಿಗಳು ತಮ್ಮ ಧರ್ಮದ ಬಗ್ಗೆ ಘೋಷಣೆಗಳನ್ನು ಕೂಗುವ ಮಟ್ಟಕ್ಕೆ ಇಳಿದಿದ್ದಾರೆ. ಶ್ರೀರಾಮನೇ ಆಗಿರಲಿ, ಅಲ್ಲಾನೇ ಆಗಿರಲಿ ಇದನ್ನೆಲ್ಲ ಇಲ್ಲಿಗೆ ನಿಲ್ಲಿಸಿ. ವಿದ್ಯಾರ್ಥಿ ಜೀವನವನ್ನು ಯಾವ ಮಟ್ಟಕ್ಕೆ ಇಳಿಸಿದ್ದೀರಿ ಎಂಬುದನ್ನು ಯೋಚಿಸಿ. ಇದನ್ನೆಲ್ಲ ಸಂಭ್ರಮಿಸಬೇಡಿ. ಧರ್ಮದ ಹೆಸರಿನಲ್ಲಿ ಮಾಡುವ ಇಂತಹ ಕಾರ್ಯಗಳನ್ನು ದಿಟ್ಟತನ ಎಂದು ಹೇಳಲಾಗುವುದಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.