31 ವರ್ಷದ ವ್ಯಕ್ತಿಯನ್ನು ಆತನ ಮಾಜಿ ಗೆಳತಿ ಹಾಗೂ ಆಕೆಯ ಕುಟುಂಬಸ್ಥರು ಸೇರಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆಯು ನಾಸಿಕ್ನಲ್ಲಿ ನಡೆದಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವ್ಯಕ್ತಿಯು ಭಾನುವಾರ ಮೃತಪಟ್ಟಿದ್ದಾರೆ.
ಈ ಪ್ರಕರಣ ಸಂಬಂಧ 23 ವರ್ಷದ ಕಲ್ಯಾಣಿ ಸೋನಾವಾನೆ ಹಾಗೂ ಆಕೆಯ ನಾಲ್ವರು ಕುಟುಂಬಸ್ಥರನ್ನು ಪೊಲೀಸರು ಬಂಧಿಸಿದ್ದು, ಇವರ ವಿರುದ್ಧ ಕೊಲೆ ಆರೋಪದ ಪ್ರಕರಣವನ್ನು ದಾಖಲಿಸಿದ್ದಾರೆ.
ಕಲ್ಯಾಣಿ ತಾಯಿ ನಿರ್ಮಲಾ, ತಂದೆ ಗೋಕುಲ್ ಹಾಗೂ ಇಬ್ಬರು ಸಹೋದರರಾದ ಹೇಮಂತ್ ಹಾಗೂ ಪ್ರಸಾದ್ರನ್ನು ಪೊಲೀಸರು ಬಂಧಿಸಿದ್ದಾರೆ.
ನಾಸಿಕ್ನ ದೇವ್ಲಾ ತಾಲೂಕಿನ ಲೋಹನೇರ್ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ವೃತ್ತಿಯಲ್ಲಿ ಪ್ಲಂಬರ್ ಆಗಿರುವ ಮೃತ ವ್ಯಕ್ತಿಯು ಮಾರುಕಟ್ಟೆಯಲ್ಲಿ ನಿಂತಿದ್ದ ವೇಳೆಯಲ್ಲಿ ಕಲ್ಯಾಣಿ ಕುಟುಂಬಸ್ಥರು ಅಲ್ಲಿಗೆ ಆಗಮಿಸಿದ್ದರು. ಕಲ್ಯಾಣಿಯ ತಂದೆ ಹಾಗೂ ಸಹೋದರರು ಕಬ್ಬಿಣದ ರಾಡ್ಗಳಿಂದ ವ್ಯಕ್ತಿಗೆ ಥಳಿಸಲು ಆರಂಭಿಸಿದರು.
ಮೂವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬಳಿಕ ಕಲ್ಯಾಣಿ ತಾಯಿ ಆತನ ಮೈಮೇಲೆ ಸೀಮೆ ಎಣ್ಣೆ ಸುರಿದರೆ ಕಲ್ಯಾಣಿ ಬೆಂಕಿ ಹಚ್ಚಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.