ಮಹಾರಾಷ್ಟ್ರದ ರಾಜಕೀಯ ಚದುರಂಗದಾಟ ಸಾಕಷ್ಟು ತಿರುವುಗಳನ್ನು ಪಡೆದು ಕೊನೆಗೂ ಒಂದು ಹಂತಕ್ಕೆ ಬಂದು ನಿಂತಿದೆ. ಬಾಳಾ ಠಾಕ್ರೆಯಿಂದ ರಾಜಕೀಯವನ್ನು ಕಲಿತ ಏಕನಾಥ್ ಶಿಂಧೆ ಅವರ ಪುತ್ರನ ಸರ್ಕಾರವನ್ನೇ ಉರುಳಿಸಿ ತಾವು ಮಹಾರಾಷ್ಟ್ರ ಸಿಎಂ ಗದ್ದುಗೆಯಲ್ಲಿ ಕುಳಿತಿದ್ದಾರೆ.
ನಿನ್ನೆ ರಾಜ ಭವನದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಕೆಲವೇ ಗಂಟೆಗಳ ಮುನ್ನ ಶಿಂಧೆ ತಮ್ಮ ಟ್ವಿಟರ್ನ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದಾರೆ.
ಹೊಸ ಪ್ರೊಫೈಲ್ ಫೋಟೋದಲ್ಲಿ ಏಕನಾಥ್ ಶಿಂಧೆ ಬಾಳಾ ಠಾಕ್ರೆಯೆದುರು ಮಂಡಿಯೂರಿ ಕುಳಿತು ಅವರನ್ನೇ ದಿಟ್ಟಿಸುತ್ತಿರುವ ಚಿತ್ರವನ್ನು ಶೇರ್ ಮಾಡಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮುನ್ನ ಈ ಫೋಟೋವನ್ನು ಶಿಂಧೆ ಅಪ್ಲೋಡ್ ಮಾಡಿದ್ದಾರೆ.
ನಿನ್ನೆ ಸಂಜೆಯವರೆಗೂ ಫಡ್ನವಿಸ್ರೇ ಮಹಾರಾಷ್ಟ್ರದ ಸಿಎಂ ಆಗ್ತಾರೆ ಎಂದು ಹೇಳಲಾಗಿತ್ತು. ಆದರೆ ರಾಜಭವನಕ್ಕೆ ತೆರಳಿ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ದೇವೇಂದ್ರ ಫಡ್ನವಿಸ್ ಏಕನಾಥ್ ಶಿಂಧೆ ಮಹಾರಾಷ್ಟ್ರದ ಸಿಎಂ ಎಂದು ಘೋಷಣೆ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಸುದ್ದಿಗೋಷ್ಠಿ ವೇಳೆ ನಾನು ಈ ಸರ್ಕಾರದ ಭಾಗವಾಗಿ ಇರುವುದಿಲ್ಲ ಎಂದ ಫಡ್ನವಿಸ್ ನಿನ್ನೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.