
ನಾರ್ತ್ ಈಸ್ಟ್ ಮಿಡಲ್ ಸ್ಕೂಲ್ ಬಳಿಯ ರಸ್ತೆಯನ್ನು ದಾಟುತ್ತಿದ್ದ ಬಾಲಕಿಯನ್ನು ವೇಗವಾಗಿ ಬಂದ ಕಾರ್ ನಿಂದ ರಕ್ಷಿಸಲಾಗಿದೆ. ವಾಹನವು ಬಾಲಕಿಯ ಕಡೆಗೆ ಬರುತ್ತಿದ್ದಂತೆ, ಎಚ್ಚೆತ್ತ ಮಹಿಳಾ ಪೊಲೀಸ್ ಆಕೆಯನ್ನು ಎಳೆದು ಬಿದ್ದಿದ್ದಾರೆ. ಇಡೀ ಘಟನೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ವಿಡಿಯೋದಲ್ಲಿರುವ ಪೊಲೀಸ್ ಆನೆಟ್ ಗುಡ್ಇಯರ್ ಅವರು ಈಶಾನ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ಮೂಲಗಳ ಪ್ರಕಾರ, ಆನೆಟ್ 14 ವರ್ಷಗಳಿಂದ ಕ್ರಾಸಿಂಗ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿಡಿಯೋದಲ್ಲಿ, ಗುಡ್ಇಯರ್ ಕಾರನ್ನು ನಿಲ್ಲಿಸಲು ತನ್ನ ಕೈ ಮೂಲಕ ಸನ್ನೆ ಮಾಡುತ್ತಿರುವುದನ್ನು ನೋಡಬಹುದು. ಆದರೆ ಬಹಳ ವೇಗವಾಗಿದ್ದ ಕಾರು ನಿಲ್ಲಿಸದೆ ಸೀದಾ ಮುಂದೆ ಬಂದಿದೆ (ಚಾಲಕನಿಗೆ ಬ್ರೇಕ್ ಒತ್ತಲು ಹಿಡಿತ ಸಿಗಲಿಲ್ಲವೆ ಎಂಬ ಬಗ್ಗೆ ಇನ್ನೂ ಗೊತ್ತಾಗಿಲ್ಲ). ಕಾರು ಬಾಲಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮಹಿಳಾ ಪೊಲೀಸ್ ಕೂಡಲೇ ಆಕೆಯನ್ನು ಎಳೆದಿದ್ದಾರೆ. ಇದರಿಂದ ಅವರು ರಸ್ತೆಯಲ್ಲೇ ಬಿದ್ದಿದ್ದು, ಸಮೀಪದಲ್ಲಿದ್ದ ಜನರು ಅವರ ಸಹಾಯಕ್ಕೆ ಧಾವಿಸಿದ್ದಾರೆ.
ಪೊಲೀಸ್ ಆನೆಟ್ ಗುಡ್ಇಯರ್ ಅವರನ್ನು ಹೀರೋ ಎಂದು ನೆಟ್ಟಿಗರು ಕರೆದಿದ್ದಾರೆ ಆಕೆಯ ಶೌರ್ಯವನ್ನು ಜನರು ಹಾಡಿ ಹೊಗಳಿದ್ದಾರೆ.