ಬುಡಕಟ್ಟು ಜನಾಂಗಕ್ಕೆ ಸೇರಿದ ಬಾಲಕನ ಶವವನ್ನು ಸಾಗಿಸಲು ಮೂವರು ಆ್ಯಂಬುಲೆನ್ಸ್ ಚಾಲಕರು ನಿರಾಕರಿಸಿದ ಹಿನ್ನೆಲೆಯಲ್ಲಿ ಮೃತ ಬಾಲಕನ ಪೋಷಕರು ದ್ವಿಚಕ್ರವಾಹನದಲ್ಲಿಯೇ ಪುತ್ರನ ಶವವನ್ನು 40 ಕಿಲೋಮೀಟರ್ ದೂರದವರೆಗೆ ಸಾಗಿಸಿದ ಅಮಾನವೀಯ ಘಟನೆಯು ಆಂಧ್ರಪ್ರದೇಶದ ಪಾಲ್ಘರ್ನ ಮೊಖಾಡದಲ್ಲಿ ನಡೆದಿದೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಮೂವರು ಆ್ಯಂಬುಲೆನ್ಸ್ ಚಾಲಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಅಜಯ್ ಪರ್ದಿ ನ್ಯುಮೋನಿಯಾದಿಂದಾಗಿ ಜವಹಾರ್ನ ಕೋಟೇಜ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈತನ ತಂದೆ ಯುವರಾಜ್ ಪರ್ದಿ ವೃತ್ತಿಯಲ್ಲಿ ಕೂಲಿ ಕಾರ್ಮಿಕ. ತಂದೆಯು ತನ್ನ ಮಗನ ಶವವನ್ನು ಸದಕ್ವಾಡಿ ಗ್ರಾಮದಲ್ಲಿರುವ ತಮ್ಮ ಮನೆಗೆ ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆಗೆ ಮುಂದಾದರು. ಈ ಆಸ್ಪತ್ರೆಯಿಂದ ಮೃತ ಬಾಲಕನ ನಿವಾಸ 40 ಕಿಲೋಮೀಟರ್ ದೂರದಲ್ಲಿತ್ತು. ಆದರೆ ಆಸ್ಪತ್ರೆಯಲ್ಲಿದ್ದ ಮೂವರು ಆ್ಯಂಬುಲೆನ್ಸ್ ಸಿಬ್ಬಂದಿ ಶವವನ್ನು ಸಾಗಿಸಲು ನಿರಾಕರಿಸಿದ್ದಾರೆ.
ಇದರಿಂದ ಬೇಸತ್ತ ಮೃತ ಬಾಲಕನ ಪೋಷಕರು ಪುತ್ರನ ಶವವನ್ನು ಕಂಬಳಿಯಲ್ಲಿ ಸುತ್ತಿಕೊಂಡು ಸ್ಕೂಟರ್ನಲ್ಲಿ ಇರಿಸಿಕೊಂಡು ಮನೆಯತ್ತ ಸಾಗಿದ್ದಾರೆ. ಇನ್ನು ಈ ವಿಚಾರವಾಗಿ ಆ್ಯಂಬುಲೆನ್ಸ್ ಸಿಬ್ಬಂದಿ ನಡೆಯನ್ನು ಸಮರ್ಥಿಸಿಕೊಂಡ ಕಾಟೇಜ್ ಆಸ್ಪತ್ರೆಯ ಸಿಎಂಒ ಡಾ. ರಾಮದಾಸ ಮರದ್, ಮೃತದೇಹಗಳನ್ನು ಸಾಗಿಸಲು ಸರ್ಕಾರಿ ಆ್ಯಂಬುಲನ್ಸ್ಗಳಿಗೆ ಅವಕಾಶವಿರಲಿಲ್ಲ. ಆಸ್ಪತ್ರೆಯಲ್ಲಿ ಶವ ಸಾಗಿಸುವ ವಾಹನ ಇರಲಿಲ್ಲ. ಹೀಗಾಗಿ ನಾವು ಖಾಸಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಮುಂದಾಗಿದ್ದೆವು. ಆದರೆ ಖಾಸಗಿ ಆ್ಯಂಬುಲೆನ್ಸ್ ಚಾಲಕ ದೊಡ್ಡ ಮೊತ್ತವನ್ನು ವಿಧಿಸಿದನು. ಈ ಮೊತ್ತವನ್ನು ಭರಿಸಲು ಯುವರಾಜನಿಗೆ ಸಾಧ್ಯವಾಗಲಿಲ್ಲ. ಆದರೆ ನಾವು ಮೂವರು ಆ್ಯಂಬುಲೆನ್ಸ್ ಚಾಲಕರನ್ನು ವಜಾಗೊಳಿಸಿದ್ದೇವೆ ಎಂದು ಹೇಳಿದ್ದಾರೆ.