ಸಾಂಬಾರು ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ನುಗ್ಗೆಕಾಯಿ ಸಾಂಬಾರು ಎಂದರೆ ಊಟ ಒಂದು ತುತ್ತು ಜಾಸ್ತಿನೇ ಸೇರುತ್ತೆ. ನುಗ್ಗೆಕಾಯಿ ಸಾಂಬಾರು ಸುಲಭವಾಗಿ ಮಾಡಬಹುದು. ಜತೆಗೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ರುಚಿಕರವಾದ ನುಗ್ಗೆಕಾಯಿ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು: 4 ಟೀ ಸ್ಪೂನ್ ತೆಂಗಿನೆಣ್ಣೆ, ¼ ಕಪ್ ಕೊತ್ತಂಬರಿ ಬೀಜ, 1 ಟೇಬಲ್ ಸ್ಪೂನ್ ಜೀರಿಗೆ, 1 ಟೀ ಸ್ಪೂನ್ ಉದ್ದಿನಬೇಳೆ, 1 ಟೀ ಸ್ಪೂನ್ –ಕಡಲೇಬೇಳೆ, 15, ಒಣ ಮೆಣಸು, ಸ್ವಲ್ಪ ಕರಿಬೇವು, ಚಿಟಿಕೆ ಇಂಗು, ½ ಟೀ ಸ್ಪೂನ್ ಮೆಂತೆಕಾಳು, 1 ಟೊಮೆಟೊ ಸಣ್ಣಗೆ ಹೆಚ್ಚಿದ್ದು, ನುಗ್ಗೆಕಾಯಿ-15 ಪೀಸ್, 2 ಕಪ್ ನೀರು, 2 ಕಪ್ ತೊಗರಿಬೇಳೆ, ½ ಕಪ್ ಹುಣಸೇಹಣ್ಣಿನ ರಸ, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿದ್ದು.
ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ ಸಾಂಬಾರಿಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನೆಲ್ಲ ಒಂದೊಂದೇ ಹುರಿದುಕೊಳ್ಳಿ ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಕುಕ್ಕರ್ ಗೆ ತೊಗರಿ ಬೇಳೆ ಹಾಕಿ ಮೂರು ವಿಷಲ್ ಕೂಗಿಸಿಕೊಳ್ಳಿ.
ನಂತರ ಒಂದು ಅಗಲವಾದ ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು ಅದಕ್ಕೆ 3 ಚಮಚ ಎಣ್ಣೆ ಹಾಕಿ. ನಂತರ ಅದಕ್ಕೆ ಸಾಸಿವೆ ಹಾಕಿ. ಸಾಂಬಾರು ಈರುಳ್ಳಿ ಹಾಕಿ. ಇದಾದ ನಂತರ ಟೊಮೆಟೊ ಹಾಕಿ ಚೆನ್ನಾಗಿ ಕೈಯಾಡಿಸಿ. ಟೊಮೆಟೊ ಮೆತ್ತಗಾದ ನಂತರ ಚಿಟಿಕೆ ಅರಿಶಿ, 2 ಟೇಬಲ್ ಸ್ಪೂನ್ ಸಾಂಬಾರು ಪುಡಿ ಹಾಕಿ. 1 ಟೀ ಸ್ಪೂನ್ ಉಪ್ಪು ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಇದಕ್ಕೆ ನುಗ್ಗೆಕಾಯಿ ಹಾಕಿ ಬೇಯಿಸಿ. ಆಮೇಲೆ ಇದಕ್ಕೆ ಬೇಯಿಸಿಟ್ಟುಕೊಂಡ ತೊಗರಿಬೇಳೆ ಹಾಕಿ ಸ್ವಲ್ಪ ನೀರು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ. ಆಮೇಲೆ ಹುಣಸೇಹಣ್ಣಿನ ರಸ ಸೇರಿಸಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕತ್ತರಿಸಿದ ಕೊತ್ತಂಬರಿಸೊಪ್ಪು ಸೇರಿಸಿದರೆ ರುಚಿಕರವಾದ ನುಗ್ಗೆಕಾಯಿ ಸಾಂಬಾರು ರೆಡಿ.